Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕೇರಳದಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ರಾಜ್ಯಪಾಲರಿಂದಲೇ ಉಪವಾಸ ಸತ್ಯಾಗ್ರಹ

ತಿರುವನಂತಪುರಂ: ಕೇರಳ ಸರ್ಕಾರದ ವಿರುದ್ಧ ಅಲ್ಲಿನ ರಾಜ್ಯಪಾಲರೇ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಕಳೆದೆರಡು ದಿನಗಳ ಹಿಂದೆ ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿದ ಮಹಿಳೆಯ ಮನೆಗೆ ಭೇಟಿ ನೀಡಿದ್ದ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ (Arif Mohammed Khan) ಕೇರಳದಲ್ಲಿ ಹೆಚ್ಚುತ್ತಿರುವ ವರದಕ್ಷಿಣೆ ಪಿಡುಗು (Dowry Harassment), ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ನಿನ್ನೆ ಉಪವಾಸ ಸತ್ಯಾಗ್ರಹ (Hunger Strike) ನಡೆಸಿದ್ದಾರೆ. ರಾಜ್ಯಪಾಲರ ಈ ನಡೆಯಿಂದ ಕೇರಳ ಸರ್ಕಾರಕ್ಕೆ (Kerela Government) ತೀವ್ರ ಮುಜುಗರ ಉಂಟಾಗಿದೆ.

ಬುಧವಾರ ಬೆಳಗ್ಗೆ 8 ಗಂಟೆಯಿಂದ ಒಟ್ಟು 10 ಗಂಟೆಗಳ ಕಾಲ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ವರದಕ್ಷಿಣೆ, ಮಹಿಳಾ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ಕೇರಳದಲ್ಲಿ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ, ವರದಕ್ಷಿಣೆಗಾಗಿ ಕಿರುಕುಳ ನೀಡಿ ಮಹಿಳೆಯ ಕೊಲೆ ಮಾಡಿದ ಹಲವು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲದೆ, ಕೇರಳದಲ್ಲಿ ವರದಕ್ಷಿಣೆ, ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕೇರಳ ಸರ್ಕಾರವೇ ವರದಿ ನೀಡಿತ್ತು. ಹೀಗಾಗಿ, ಈ ಬಗ್ಗೆ ಅರಿವು ಮೂಡಿಸಲು ರಾಜ್ಯಪಾಲರು ಉಪವಾಸ ಕೈಗೊಂಡಿದ್ದಾರೆ.

ಕೇರಳದಲ್ಲಿ ಗಾಂಧಿ ಸ್ಮಾರಕ ನಿಧಿ ಸೇರಿದಂತೆ ಹಲವು ಸಂಘಟನೆಗಳು ವರದಕ್ಷಿಣೆ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ವಿರುದ್ಧ ಅರಿವು ಮೂಡಿಸಲು ಉಪವಾಸ ಸತ್ಯಾಗ್ರಹ ನಡೆಸಿದ್ದವು. ಆ ಅಭಿಯಾನಕ್ಕೆ ಬೆಂಬಲ ಸೂಚಿಸಲು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೂಡ ಉಪವಾಸ ಮಾಡಿದ್ದಾರೆ. ನಿನ್ನೆ ನಡೆದ ರಾಜ್ಯಪಾಲರ ಉಪವಾಸ ಸತ್ಯಾಗ್ರಹಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಸೂಚಿಸಿತ್ತು.

ಕೇರಳದಲ್ಲಿನ ನಡೆಯುತ್ತಿರುವ ಘಟನೆಗಳಿಂದ ರಾಜ್ಯಪಾಲರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಕೇರಳ ಬಿಜೆಪಿ ಹೇಳಿತ್ತು. ಕಾಂಗ್ರೆಸ್ ನಾಯಕರು ಕೂಡ ಕೇರಳ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಒಟ್ಟಾರೆ, ಸಾಮಾಜಿಕ ಜಾಗೃತಿ ಮೂಡಿಸಲು ಕೇರಳದ ರಾಜ್ಯಪಾಲರು ನಡೆಸಿದ ಉಪವಾಸ ಸತ್ಯಾಗ್ರಹ ರಾಜಕೀಯವಾಗಿಯೂ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಕೇರಳದ ರಾಜಭವನದಲ್ಲಿ ಆರಿಫ್ ಮೊಹಮ್ಮದ್ ಖಾನ್ ನಿನ್ನೆ ಬೆಳಿಗ್ಗೆಯಿಂದ ಸಂಜೆಯವರೆಗೂ ಉಪವಾಸ ನಡೆಸಿದರು. ಕೆಲವು ದಿನಗಳ ಹಿಂದೆ ಕೇರಳದಲ್ಲಿ 24 ವರ್ಷದ ವಿಸ್ಮಯಾ ನಾಯರ್ ಎಂಬ ಆಯುರ್ವೇದ ವಿದ್ಯಾರ್ಥಿನಿ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಗಂಡನ ಮನೆಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ಮನೆಗೆ ಖುದ್ದಾಗಿ ರಾಜ್ಯಪಾಲರೇ ಹೋಗಿ ಆಕೆಯ ಪೋಷಕರಿಗೆ ಸಾಂತ್ವನ ಹೇಳಿದ್ದು ಭಾರೀ ಸುದ್ದಿಯಾಗಿತ್ತು. ರಾಜ್ಯಪಾಲರ ನಡೆಗೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಅದರ ಮಾರನೇ ದಿನವೇ ಉಪವಾಸ ಕೈಗೊಳ್ಳುವ ಮೂಲಕ ರಾಜ್ಯಪಾಲರು ಕೇರಳ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಕಾಂಗ್ರೆಸ್‌ ಅಧ್ಯಕ್ಷ ಕೆ. ಸುಧಾಕರ್, ‘ರಾಜ್ಯಪಾಲರೇ ಸಾಮಾಜಿಕ ಪಿಡುಗಿನ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿರುವ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ. ಈ ಮೂಲಕ ರಾಜ್ಯಪಾಲರು ವರದಕ್ಷಿಣೆ ಪಿಡುಗಿನ ವಿರುದ್ಧ ಕೇರಳ ಸರ್ಕಾರ ಕ್ರಮ ಕೈಗೊಳ್ಳಲೇಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯಪಾಲರ ಈ ನಡೆಗೆ ಸರ್ಕಾರವೇ ಜವಾಬ್ದಾರಿಯಾಗಿದೆ’ ಎಂದು ಹೇಳಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ವಿ. ಮುರಳೀಧರನ್ ಟ್ವೀಟ್ ಮಾಡಿದ್ದು, ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರ ಈ ವರ್ತನೆ ಎಲ್ಲರಿಗೂ ಮಾದರಿಯಾಗಿದೆ. ಗಾಂಧಿ ತತ್ವಗಳಿಂದ ಪ್ರಭಾವಿತರಾಗಿರುವ ಅವರು ಶಾಂತರೀತಿಯಲ್ಲೇ ಸಾಮಾಜಿಕ ಪಿಡುಗಿನ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

No Comments

Leave A Comment