Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಬೆಳ್ಳಂಬೆಳಗ್ಗೆಯೇ ಎಸಿಬಿ ಬಿಗ್ ಶಾಕ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 9 ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ

ಬೆಂಗಳೂರು: ರಾಜ್ಯದ ಹಲವು ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಗುರುವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ, ರಾಜ್ಯದ ವಿವಿಧ ಜಿಲ್ಲೆಗಳ 40 ಕಡೆಗಳಲ್ಲಿ 9 ಅಧಿಕಾರಿಗಳಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ಉಡುಪಿ, ಮಂಡ್ಯ ಇತ್ಯಾದಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಅಕ್ರಮ ಸಂಪತ್ತು, ವಿವಿಧ ಕಡೆಗಳಲ್ಲಿ ಭೂಮಿ, ಮನೆ ಹೊಂದಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು, ಉಡುಪಿ, ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಮಂಡ್ಯ ಸೇರಿದಂತೆ 40 ಕಡೆಗಳಲ್ಲಿ ಇಂದು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ, ಶೋಧ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ನಗರಸಭೆ ಯೋಜನಾ ನಿರ್ದೇಶಕ ಹೆಚ್ ಆರ್ ಕೃಷ್ಣಪ್ಪ ಅವರ ಮನೆ, ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ, ಆಸ್ತಿಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಹೆಚ್ ಆರ್ ಕೃಷ್ಣಪ್ಪನವರ ಸ್ವಗ್ರಾಮ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯ ಮನೆ, ಕೋಲಾರ ಜಿಲ್ಲೆಯ ಮಾಲೂರಿನ ಮನೆ, ಬೆಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿರುವ ಮನೆ ಮತ್ತು ಕಚೇರಿ ಸೇರಿ 5 ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳ ತಂಡ ದಾವಣಗೆರೆ ಎಸಿಪಿ ಎಸ್ ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮಂಗಳೂರಿನ ನಗರ ಅಭಿವೃದ್ಧಿ ಘಟಕದ ಇಂಜಿನಿಯರ್ ಜಿ. ಶ್ರೀಧರ್, ಉಡುಪಿಯ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಇಂಜಿನಿಯರ್ ಕೃಷ್ಣ, ಕೆಆರ್ ಡಿಎಲ್ ಅಧಿಕಾರಿ ಆರ್. ಪಿ ಕುಲಕರ್ಣಿ, ಮಂಡ್ಯದ ಅರಣ್ಯ ಅಧಿಕಾರಿ ವೆಂಕಟೇಶ್, ವಿಜಯಪುರ ಹೆಸ್ಕಾಂ ಇಂಜಿನಿಯರ್ ಸಿದ್ಧರಾಮ ಮಲ್ಲಿಕಾರ್ಜುನ್, ಕೋರಮಂಗಲ ಆರ್‌ಟಿಓ ಅಧಿಕಾರಿ ಕೃಷ್ಣಮೂರ್ತಿ, ಬಳ್ಳಾರಿ ಎಲೆಕ್ಟ್ರಿಕಲ್ ಇಂಜಿನಿಯರ್ ವಿಜಯ್ ಕುಮಾರ್ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಈ ಎಲ್ಲ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ ಐಆರ್ ದಾಖಲಾಗಿದೆ. ಎಸಿಬಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

No Comments

Leave A Comment