Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಮೈಸೂರಿನ ಹೊಟೇಲ್ ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಸಪ್ಲೈಯರ್ ಮೇಲೆ ಹಲ್ಲೆ: ಇಂದ್ರಜಿತ್ ಲಂಕೇಶ್ ಆರೋಪ, ಗೃಹ ಸಚಿವರಿಗೆ ದೂರು

ಬೆಂಗಳೂರು: ಬ್ಯಾಂಕಿನಿಂದ ಸಾಲ ಕೊಡಿಸುವ ವಿಚಾರದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ 25 ಕೋಟಿ ರೂಪಾಯಿ ವಂಚನೆ ಮಾಡಲು ಯತ್ನಿಸಿದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಪ್ರಕರಣದ ಪ್ರಮುಖ ಆರೋಪಿ ಅರುಣ ಕುಮಾರಿ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದರು.

ಇದೀಗ ಅಖಾಡಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಎಂಟ್ರಿಯಾಗಿದೆ. ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಟ ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ದೂರು ನೀಡಿದ್ದಾರೆ. ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಮಹಿಳೆ ಅರುಣಾ ಕುಮಾರಿ ಪರವಾಗಿ ಪರೋಕ್ಷವಾಗಿ ನಿಂತಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ದೂರು ನೀಡಿ ಹೊರಗೆ ಬಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ದರ್ಶನ್ ಮತ್ತು ಅವರ ಮೈಸೂರಿನ ಸ್ನೇಹಿತರಾದ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೆಲಂಟ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸಂದೇಶ್ ನಾಗರಾಜ್ ಅವರಿಗೆ ಸೇರಿದ ಹೊಟೇಲ್ ನಲ್ಲಿ ಇತ್ತೀಚೆಗೆ ಇದೇ ಸ್ಟಾರ್ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಹೋಗಿ ಊಟ ಪಾರ್ಟಿ ಮಾಡಿ ಪಾಪದ ದಲಿತ ಸಪ್ಲೈಯರ್ ಗೆ ಹೊಡೆದಿದ್ದಾರೆ. ಇದರಿಂದ ಅವನ ಕಣ್ಣು ಮಂಜಾಗಿ ಹೋಗಿದೆ, ನಂತರ ಹೋಗಿ ಪೊಲೀಸ್ ಸ್ಟೇಷನ್ ನಲ್ಲಿ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ, ಸಾಕ್ಷಿಗಳನ್ನಿಟ್ಟುಕೊಂಡೇ ಇಂದು ಗೃಹ ಸಚಿವರಿಗೆ ದೂರು ನೀಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇನೆ ಎಂದರು.

ಇಂದು ಸುದ್ದಿಗೋಷ್ಠಿಯಲ್ಲಿ ಇಂದ್ರಜಿತ್ ಲಂಕೇಶ್ ಹೇಳಿದ್ದಿಷ್ಟು: ಮೈಸೂರಿನಲ್ಲಿ ಇಂದು ಸೆಲೆಬ್ರಿಟಿಗಳ ಮಾತು,ವರ್ತನೆ, ದುರಹಂಕಾರ ಮಿತಿಮೀರುತ್ತಿದೆ ಎಂದು ಅನಿಸುತ್ತಿದೆ, ಇದರಿಂದ ಸಾಮಾನ್ಯ ಬಡವರಿಗೆ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ, ಕಳೆದ ನಾಲ್ಕೈದು ದಿನಗಳಿಂದ ಮಾಧ್ಯಮಗಳಲ್ಲಿ ಸೆಲೆಬ್ರಿಟಿಗಳು ಮಾತನಾಡುತ್ತಿರುವುದನ್ನು ನೋಡಿದ್ದೇನೆ, ಅವರು ಬಳಸುವ ಭಾಷೆ, ವರ್ತನೆ ಅಸಹನೆ ಹುಟ್ಟಿಸುತ್ತಿದೆ. ಮೈಸೂರಿನಲ್ಲಿ ಪೊಲೀಸರು ಸೆಲೆಬ್ರಿಟಿಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎನಿಸುತ್ತಿದೆ ಎಂದು ಆರೋಪಿಸಿದರು.

ಸೆಟ್ಲ್ ಮೆಂಟ್ ಸ್ಟೇಷನ್: ಮೈಸೂರು ಪೊಲೀಸ್ ಸ್ಟೇಷನ್ ನ್ಯಾಯ ಸಿಗುವ ಕೇಂದ್ರವಾಗಿರದೆ ಸೆಟ್ಲ್ ಮೆಂಟ್ ಸ್ಟೇಷನ್ ಆಗಿದೆ. ಸಾಮಾನ್ಯ ಮಹಿಳೆಯರು, ಬಡವರ ತೊಂದರೆಗಳನ್ನು ರಾಜಿ, ಇತ್ಯರ್ಥ್ಯ ಮಾಡಿ ಕಳುಹಿಸುತ್ತಾರೆ. ಇಲ್ಲಿ ನಾನು ಮಹಿಳೆ ಅರುಣ ಕುಮಾರಿ ಪರ ನಿಂತುಕೊಂಡು ಮಾತನಾಡುತ್ತಿದ್ದೇನಂತಲ್ಲ, ಆಕೆಯ ಪರಿಚಯವೇ ಇಲ್ಲ, ನಾಳೆ ಒಂದು ಮಹಿಳೆಯ ಮೇಲೆ ಅತ್ಯಾಚಾರವಾದರೆ ಅದನ್ನು ಕೂಡ ಸೆಟ್ಲ್ ಮೆಂಟ್ ಮಾಡಿ ಕಳುಹಿಸುತ್ತೀರಾ ಎಂದು ಪೊಲೀಸ್ ವ್ಯವಸ್ಥೆಯನ್ನು ಪ್ರಶ್ನಿಸಿದರು. ಪೊಲೀಸರು ಇಂದು ಬಳೆ ತೊಟ್ಟುಕೊಂಡು ಕುಳಿತುಕೊಂಡಂತಿದ್ದಾರೆ. ಕ್ರಮ ಕೈಗೊಳ್ಳಿ, ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿ ಎಂದು ಒತ್ತಾಯಿಸಿದರು.

ಅರುಣ ಕುಮಾರಿ ಪ್ರಕರಣ ಆಗುವ ಸ್ವಲ್ಪ ದಿನಗಳ ಮೊದಲು ಸಂದೇಶ್ ನಾಗರಾಜ್ ಅವರ ಪ್ರಿನ್ಸ್ ಹೊಟೇಲ್ ನಲ್ಲಿ ದಲಿತ ಸಪ್ಲೈಯರ್ ಮೇಲೆ ಹೊಡೆದ ಘಟನೆಯ ಸಾಕ್ಷ್ಯಗಳು ನನ್ನ ಬಳಿ ಇವೆ, ಅದನ್ನು ಗೃಹ ಸಚಿವರಿಗೆ ನೀಡಿದ್ದೇನೆ, ಮರುದಿನ ಆತನ ಪತ್ನಿ ಪೊರಕೆ ಹಿಡಿದುಕೊಂಡು ಹೊಡೆಯಲು ಬಂದಿರುತ್ತಾರೆ, ಆಗ ದರ್ಶನ್ ಮತ್ತು ಗ್ಯಾಂಗ್ ಸೆಟ್ಲ್ ಮೆಂಟ್ ಮಾಡಿಸುತ್ತಾರೆ.

ನಾನು ಸಾಕ್ಷ್ಯಗಳನ್ನು ಕೊಡುತ್ತೇನೆ: ಹೊಟೇಲ್ ನಲ್ಲಿ ನಡೆದ ಹಲ್ಲೆ ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳನ್ನು ನಂತರ ಡಿಲೀಟ್ ಮಾಡಿಸಿದ್ದಾರೆ. ಪೊಲೀಸರಿಗೆ ತನಿಖೆ ವೇಳೆ ಸಂಪೂರ್ಣ ಸಹಕಾರ ನೀಡುತ್ತೇನೆ, ಗೃಹ ಇಲಾಖೆಗೆ ಮತ್ತು ಪೊಲೀಸರಿಗೆ ಸಾಕ್ಷ್ಯಗಳು ಬೇಕೆಂದರೆ ನಾನು ಕೊಡುತ್ತೇನೆ, ಮಾಧ್ಯಮಗಳಿಗೂ ನೀಡುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ತಲೆ ಸೀಳ್ತೀನಿ ಎಂದವರು ರಾಜಿಯಾದದ್ದು ಹೇಗೆ: ನಟ ದರ್ಶನ್ ಅವರು ಲೋನ್ ವಂಚನೆ ಕೇಸಿನಲ್ಲಿ ತಪ್ಪಿತಸ್ಥರು ಯಾರೇ ಇರಲಿ, ಅವರನ್ನು ಸುಮ್ಮನೆ ಬಿಡಲ್ಲ ಎಂದು ಸುದ್ದಿಗೋಷ್ಠಿ ಕರೆದು ಆಕ್ರೋಶ ವ್ಯಕ್ತಪಡಿಸಿದ್ದರು, ಒಬ್ಬ ಸೆಲೆಬ್ರಿಟಿಯಾಗಿ ಸಮಾಜಕ್ಕೆ ಮಾದರಿಯಾಗಬೇಕಾದವರು ಬಹಿರಂಗವಾಗಿ ತಲೆ ಸೀಳ್ತೀನಿ ಎಂದು ಹೇಳಿಕೆ ಕೊಡುತ್ತಾರೆ, ಸಿನೆಮಾದಲ್ಲಿ ಹೀರೋ ಆಗಿರುವವರು ಈ ರೀತಿಯ ಪದ ಬಳಕೆ ಮಾಡುವುದು ಸರಿಯೇ, ಇದು ನಿಜ ಜೀವನ, ಸಿನೆಮಾ ಅಲ್ಲ, ನಿಜ ಜೀವನದಲ್ಲಿ ಅವರು ಹೊಡೆದು, ಹಲ್ಲೆ ಮಾಡಿ ಈಗಾಗಲೇ ಸಾಕಷ್ಟು ಸುದ್ದಿಯಾಗಿದ್ದಾರೆ, ಇನ್ನೂ ಅವರಿಗೆ ಬುದ್ದಿ ಬಂದಿಲ್ಲವೇ, ತಳೆ ಸೀಳ್ತೀನಿ ಅನ್ನುವ ಮಟ್ಟಕ್ಕೆ ಕೋಪಕ್ಕೆ ಹೋದವರು ನಂತರ ಒಂದೇ ದಿನದಲ್ಲಿ ಸಮಾಧಾನಗೊಂಡು ನಿರ್ಮಾಪಕ ಉಮಾಪತಿಯವರ ಜೊತೆ ಹೇಗೆ ಒಂದಾದರು, ಈ ಪ್ರಕರಣ ಹಿಂದೆ ಸಾಕಷ್ಟು ನಡೆದಿದೆ, ಆ ಬಗ್ಗೆಯೂ ನನಗೆ ಗೊತ್ತಿದೆ, ಇಲ್ಲಿ ಅರುಣ ಕುಮಾರಿ ಎಂಬ ಮಹಿಳೆ ಬಲಿಪಶುವಾಗಿದ್ದಾರೆ ಎಂದರು.

ಅರುಣ ಕುಮಾರಿಯವರನ್ನು ಪರಿಚಯವಿಲ್ಲದಿದ್ದರೆ ದರ್ಶನ್ ಮನೆಗೆ ಏಕೆ ಕರೆಸಿಕೊಂಡರು, ನಂತರ ರಾಕೇಶ್ ಪಾಪಣ್ಣ ಅವರ ಕಾರಿನಲ್ಲಿ ಕರೆದುಕೊಂಡು ಹೋಗಿ ಬೆದರಿಕೆ ಹಾಕುತ್ತಾರೆ, ಲೋನ್ ಗೆ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕೆಂದರೆ ಹತ್ತಾರು ಫೈಲ್ ಗಳಿಗೆ ಸಹಿ ಮಾಡಿಸಿಕೊಳ್ಳುತ್ತಾರೆ, ಸಾಮಾನ್ಯರು ಈ ರೀತಿ ವಂಚನೆಯಾದರೆ ಜೈಲಿಗೆ ಹೋಗಬೇಕಾಗುತ್ತದೆ, ಅದೇ ಸೆಲೆಬ್ರಿಟಿಗಳಿಗಾದರೆ ಇನ್ನೊಂದು ನ್ಯಾಯವೇ ಎಂದು ಇಂದ್ರಜಿತ್ ಆಕ್ರೋಶ ವ್ಯಕ್ತಪಡಿಸಿದರು.

ಪವಿತ್ರಾ ಗೌಡ ಕೂಡ ಇದ್ದರು: ನಟ ದರ್ಶನ್ ಅವರ ಜೊತೆ ಹಿಂದಿನಿಂದಲೂ ತಳುಕು ಹಾಕಿಕೊಂಡಿರುವ ಪವಿತ್ರಾ ಗೌಡ ಹಾಗೂ ಮತ್ತಿಬ್ಬರು ಹೆಣ್ಣುಮಕ್ಕಳು ಕೂಡ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ ನಲ್ಲಿ ಗಲಾಟೆಯಾದ ಸಂದರ್ಭದಲ್ಲಿ ಇದ್ದರು ಎಂದು ಸಹ ಇಂದ್ರಜಿತ್ ಹೇಳಿದ್ದಾರೆ.

ಅಭಿಮಾನಿಗಳು ನಟರ ನಟನೆಯನ್ನು ಇಷ್ಟಪಡಬೇಕೆ ಹೊರತು ನಿಜ ಜೀವನದಲ್ಲಿ ಏನು ಮಾಡಿದರೂ ಅವರನ್ನು ಪ್ರೋತ್ಸಾಹಿಸುವುದು, ಬೆಂಬಲ ನೀಡುವುದು ಮಾಡಬಾರದು. ಈ ಪ್ರಕರಣದಲ್ಲಿ ತನಿಖೆ ನಡೆಯಲಿ, ನನ್ನ ಆತ್ಮಸಾಕ್ಷಿಯಂತೆ ನಾನು ಇವತ್ತು ಬಂದು ಗೃಹ ಸಚಿವರಿಗೆ ದೂರು ನೀಡಿದ್ದೇನೆ ಎಂದರು.

ದರ್ಶನ್ ಆಣೆ ಮಾಡಿ ಹೇಳಲಿ: ಅಂದು ಹೊಟೇಲ್ ನಲ್ಲಿ ಹಲ್ಲೆ ಪ್ರಕರಣ ನಡೆದಿರಲಿಲ್ಲ ಎಂದಿದ್ದರೆ ದರ್ಶನ್ ಅವರು ದೇವರ ಮೇಲೆ ಆಣೆ ಮಾಡಿ ಹೇಳಲಿ ಎಂದು ಕೂಡ ಸವಾಲು ಹಾಕಿದರು. ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಕೂಡ ಸೆಲೆಬ್ರಿಟಿಗಳು ತಪ್ಪಿಸಿಕೊಂಡಿದ್ದಾರೆ. ಆ ಪ್ರಕರಣ ಸರಿಯಾಗಿ ತನಿಖೆಯಾಗಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿಲ್ಲ ಎಂದು ಕೂಡ ಇಂದ್ರಜಿತ್ ಅಸಮಾಧಾನ ವ್ಯಕ್ತಪಡಿಸಿದರು.

No Comments

Leave A Comment