Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕೆಆರ್ ಎಸ್ ಬಿರುಕು ಬಿಟ್ಟಿದೆಯಾ ಎಂದು ನಾನು ಆತಂಕ ವ್ಯಕ್ತಪಡಿಸಿ ಪ್ರಶ್ನೆ ಮಾಡಿದ್ದೆ, ಅದು ತಪ್ಪೇ: ಸಂಸದೆ ಸುಮಲತಾ

ಮೈಸೂರು: ಕೃಷ್ಣ ರಾಜ ಸಾಗರ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಕಳೆದೆರಡು ವರ್ಷಗಳಿಂದ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ನಾನು ಹೇಳುವುದು ರಾಜಕೀಯ ಲಾಭಕ್ಕಾದರೆ ಮಾಧ್ಯಮಗಳು ಕೂಡ ಹಾಗಾದರೆ ತಪ್ಪಾಗಿ ವರದಿ ಮಾಡುತ್ತಿವೆಯೇ, ಅಷ್ಟಕ್ಕೂ ಕೆಆರ್ ಎಸ್ ಬಿರುಕು ಬಿಟ್ಟಿದೆಯೇ ಎಂದು ಆತಂಕ ವ್ಯಕ್ತಪಡಿಸುವುದರಲ್ಲಿ ತಪ್ಪೇನಿದೆ ಎಂದು ಮಂಡ್ಯ ಸಂಸದೆ ಸುಮಲತಾ ಪ್ರಶ್ನಿಸಿದ್ದಾರೆ.

ಇಂದು ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳಾದ  ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರಾದರೂ ಬಂದು ನನ್ನಲ್ಲಿ ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ, ಸ್ವಲ್ಪ ಹೋಗಿ ಪರಿಶೀಲಿಸಿ ಎಂದು ಹೇಳಿದರೆ ಆ ಕ್ಷೇತ್ರದ ಸಂಸದೆಯಾಗಿ ನಾನದನ್ನು ನಿರ್ಲಕ್ಷಿಸಬೇಕೆ ಅಥವಾ ಹೋಗಿ ನೋಡಬೇಕೆ ಎಂದು ಕೇಳಿದ್ದಾರೆ.

ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ನಾನು ಹೇಳಿರಲಿಲ್ಲ, ದಿಶಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಅಣೆಕಟ್ಟು ಬಿರುಕು ಬಿಟ್ಟಿದೆಯೇ ಎಂದು ನಾನು ಪ್ರಶ್ನಿಸಿದ್ದೆ, ಆ ವಿಷಯ ಹಲವು ತಿರುವುಗಳನ್ನು ಪಡೆದುಕೊಂಡು ಇಲ್ಲಿಗೆ ಬಂದು ನಿಂತಿದೆ. ಅಣೆಕಟ್ಟು ಬಿರುಕು ಬಿಟ್ಟಿದೆಯೇ ಇಲ್ಲವೇ ಎಂದು ಹೇಳುವುದು, ನಿರ್ಧರಿಸುವುದು ನಾವ್ಯಾರು ಅಲ್ಲ, ಸಂಬಂಧಪಟ್ಟ ಸಮರ್ಥ ಅಧಿಕಾರಿಗಳು ಪ್ರಮಾಣಪತ್ರ ನೀಡಬೇಕು. ಅಣೆಕಟ್ಟಿಗೆ ಈಗ ಸದ್ಯಕ್ಕೆ ಸಮಸ್ಯೆಯಿಲ್ಲದಿದ್ದರೂ ಇನ್ನು 10 ವರ್ಷ ಬಿಟ್ಟು-50 ವರ್ಷ ಬಿಟ್ಟು ಅಪಾಯವಾದರೆ ಅದು ಸರಿಯೇ, ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಗಣಿಗಾರಿಕೆ ನಡೀತಿದೆ, ಇದು ಡೇಂಜರ್ ಅಲ್ವಾ ಎಂದು ಸುಮಲತಾ ಕೇಳಿದ್ದಾರೆ.

ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತ್ಯಾಗದಿಂದ ಕಷ್ಟಪಟ್ಟು ಸರ್ ಎಂ ವಿಶ್ವೇಶ್ವರಯ್ಯನವರು ಕಟ್ಟಿಸಿದ ಡ್ಯಾಂ ಅದು. ಇದಕ್ಕೆ ದೀರ್ಘ ಇತಿಹಾಸ ಪರಂಪರೆಯಿದೆ, ಹೀಗಿರುವಾಗ ಅದನ್ನು ಕಾಪಾಡುವುದು ಬಿಟ್ಟು ಸುತ್ತಮುತ್ತ ಕಲ್ಲು ಕ್ವಾರಿ ನಡೆದರೂ ಸುಮ್ಮನೆ ನೋಡಿಕೊಂಡು ಬಿಟ್ಟುಬಿಡುವುದು, ರಾಜಕಾರಣಿಗಳು ನಿರ್ಲಕ್ಷ್ಯ ವಹಿಸುವುದು ಎಷ್ಟು ಸರಿ ಎಂದು ಸುಮಲತಾ ಪ್ರಶ್ನಿಸಿದ್ದಾರೆ

No Comments

Leave A Comment