Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕಾಂಗ್ರೆಸ್ ನಲ್ಲಿ ಯುವ ನಾಯಕತ್ವ ಕಗ್ಗಂಟು: ರಾಹುಲ್ ಗಾಂಧಿ ಅಸಮಾಧಾನ; ಜುಲೈ 4ಕ್ಕೆ ರಣದೀಪ್ ಸುರ್ಜೆವಾಲಾ ಆಗಮನ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಕಗ್ಗಂಟು ತಾರಕಕ್ಕೇರಿದೆ. ಯುವ ಕಾಂಗ್ರೆಸ್ ಅಧ್ಯಕ್ಷರ ಪಟ್ಟ ಗೊಂದಲ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬಣಗಳ ನಡುವಣ ಗುದ್ದಾಟ ಆರಂಭವಾಗಿ ಅದೀಗ ತಾರಕಕ್ಕೇರಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು, ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಪಕ್ಷ ಸಂಘಟನೆ ಮಾಡಿ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದರಾಗಿ ಎಂದು ಕಿವಿಮಾತು ಹೇಳಿದರೂ ಕೇಳದೆ ತಮ್ಮ ನೇರಕ್ಕೆ ಯೋಚನೆ ಮಾಡುತ್ತಿರುವ ರಾಜ್ಯ ನಾಯಕರ ಬಗ್ಗೆ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಜುಲೈ 4ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಯುವ ಕಾಂಗ್ರೆಸ್ ಪಟ್ಟಕ್ಕೆ ಬಿಗಿ ಪಟ್ಟು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಕ್ಷಾ ರಾಮಯ್ಯ ಮತ್ತು ಮಹಮ್ಮದ್ ನಲಪಾಡ್ ಬಣಗಳ ನಡುವೆ ಹಿಂದಿನಿಂದಲೂ ಅಸಮಾಧಾನ, ಭಿನ್ನಮತ, ಜಗಳ ನಡೆಯುತ್ತಲೇ ಇದ್ದು ಅದೀಗ ಬಹಿರಂಗವಾಗಿ ತಾರಕಕ್ಕೇರಿದೆ. ಸಿದ್ದರಾಮಯ್ಯನವರು ರಕ್ಷಾ ರಾಮಯ್ಯ ಪರವಾಗಿದ್ದರೆ ಡಿ ಕೆ ಶಿವಕುಮಾರ್ ಬೆಂಬಲ, ಆಸರೆ ಮೊಹಮ್ಮದ್ ನಲಪಾಡ್ ಮೇಲಿದೆ.

ಮೊನ್ನೆ ತಮ್ಮ ನಿವಾಸಕ್ಕೆ ರಕ್ಷಾ ರಾಮಯ್ಯನವರನ್ನು ಕರೆಸಿ ಮಾತನಾಡಿಸಿದ್ದ ಡಿ ಕೆ ಶಿವಕುಮಾರ್ ನಲಪಾಡ್ ಮತ್ತು ನಿಮ್ಮ ಮಧ್ಯೆ 50:50 ಫಾರ್ಮುಲಾದಲ್ಲಿ ಅಧಿಕಾರ ಹಂಚಿಕೊಳ್ಳಿ ಎಂದಿದ್ದರಂತೆ. ಅದಕ್ಕೆ ನಾನು ಕೂಡ ನಿಮ್ಮ ಮತ್ತು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ, ಅದೇಕೆ ನೀವು ತಾರತಮ್ಯ ತೋರಿಸುತ್ತೀರಿ ಎಂದು ರಕ್ಷಾ ರಾಮಯ್ಯ ಡಿ ಕೆ ಶಿವಕುಮಾರ್ ಬಳಿ ಅಸಮಾಧಾನ ತೋಡಿಕೊಂಡಿದ್ದರಂತೆ.

ದೆಹಲಿಯಲ್ಲಿ ನಾಯಕರು ಬೀಡು ಬಿಟ್ಟು ತಮ್ಮದೇ ರೀತಿಯಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದರು, ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದುಬಂದಿತ್ತು. ನಿನ್ನೆ ರಕ್ಷಾ ರಾಮಯ್ಯ ಅವರ ತಂದೆ ಮಾಜಿ ಸಚಿವ ಎಂ ಆರ್ ಸೀತಾರಾಂ ಸಿದ್ದರಾಮಯ್ಯ ಮನೆಗೆ ಹೋಗಿದ್ದರು. ಆಗ ಸಿದ್ದರಾಮಯ್ಯನವರು ವಿವರ ಪಡೆದುಕೊಂಡು ದೆಹಲಿಯಲ್ಲಿ ರಾಹುಲ್ ಗಾಂಧಿ ಕಚೇರಿಗೆ ಫೋನ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

No Comments

Leave A Comment