Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಹೆಚ್ಚಳ: ಕೊರೋನಾ ನಡುವೆ ರಾಜ್ಯದಲ್ಲಿ ಮತ್ತೊಂದು ತಲೆನೋವು!

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ 2ನೇ ಅಲೆ ಆರ್ಭಟದಿಂದ ಸುಧಾರಿಸಿಕೊಳ್ಳುತ್ತಿರುವ ನಡುವಲ್ಲೇ ರಾಜ್ಯದಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಹೆಚ್ಚಾಗುತ್ತಿದ್ದು, ಇದು ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಕೊರೋನಾ ಕಾರಣದಿಂದಾಗಿ ಈ ವರ್ಷ ಕೇಂದ್ರ ಸರ್ಕಾರ ಹಿಂದಿನ ವರ್ಷದಂತೆ ಎಫ್ಎಂಡಿ ಲಸಿಕೆಗಳನ್ನು ನೀಡದಿರುವುದು ಇದಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮನುಷ್ಯರಿಗೆ ಕೊರೋನಾ ಸೋಂಕಿನಂತೆಯೇ ಜಾನುವಾರಿಗಳಿಗೂ ಕಾಲುಬಾಯಿ ರೋಗ ಹರಡುತ್ತದೆ. ಈ ರೋಗವು 1883ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಜಾನುವಾರುಗಳ ಮೂತ್ರ, ಮಲ ಹಾಗೂ ಜೊಲ್ಲು, ಗಾಳಿಯಿಂದಲೂ ಈ ರೋಗ ಹರಡುತ್ತದೆ. ದುರ್ಬಲ ಪ್ರಾಣಿಗಳು ಪ್ರಮುಖವಾಗಿ ಹಸು ಹಾಗೂ ಎಮ್ಮೆಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರೋಗ ನಿಯಂತ್ರಿಸಲು ಸರ್ಕಾರ ಪ್ರತೀ 6 ತಿಂಗಳುಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ನೀಡಲೇಕು. ಈ ಲಸಿಕೆಯು 180 ದಿನಗಳ ಕಾಲ ಜಾನುವಾರುಗಳನ್ನು ರಕ್ಷಣೆ ಮಾಡುತ್ತದೆ.

ರಾಜ್ಯದಲ್ಲಿ 2020 ಏಪ್ರಿಲ್ ಹಾಗೂ 2020ರ ಅಕ್ಟೋಬರ್/ನವೆಂಬರ್ ತಿಂಗಳಿನಲ್ಲಿ ಈ ಲಸಿಕೆಯನ್ನು ನೀಡಲಾಗಿತ್ತು. ಇದಾದ ಬಳಿಕ ಲಸಿಕೆಯನ್ನು ನೀಡಲಾಗಿರಲಿಲ್ಲ. ಈ ಕಾರಣಕ್ಕೆ ಇದೀಗ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು, ಎಫ್ಎಂಡಿ ಲಸಿಕೆ ಅಭಿಯಾನವನ್ನು ಭಾರತ ಸರ್ಕಾರ ನಡೆಸುತ್ತದೆ. ಕೊರೋನಾ ಸಾಂಕ್ರಾಮಿಕ ರೋಗ ತಲೆದೋರಿರುವ ಪರಿಣಾಮ ಲಸಿಕೆ ನೀಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.

ಕೆಲ ವಾರಗಳ ಹಿಂದೆಷ್ಟೇ ಮೂರು ಜಿಲ್ಲೆಗಳಲ್ಲಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಿದ್ದ ಈ ರೋಗ ಇದೀಗ 9 ಜಿಲ್ಲೆಗಳಿಗೆ ವ್ಯಾಪಿಸಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶ, ಮಂಡ್ಯ, ರಾಮನಗರ, ಚಿಕ್ಕಬಳ್ಳಾರು, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ.

ಲಸಿಕೆ ಅಭಿಯಾನ ಆರಂಭಿಸುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಸೋಂಕಿತ ಜಾನುವಾರುಗಳಿರುವ ಸ್ಥಳದಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಜಾನುವಾರುಗಳಿಗೂ ಲಸಿಕೆ ನೀಡಲಾಗುತ್ತದೆ. ಪರಿಸ್ಥಿತಿ ನಿಯಂತ್ರಿಸಲು ನಮ್ಮ ಅಧಿಕಾರಿಗಳು ಶ್ರಮ ಪಡುತ್ತಿದ್ದಾರೆಂದು ಚವ್ಹಾಣ್ ಅವರು ತಿಳಿಸಿದ್ದಾರೆ.

ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಪ್ರೊಫೆಸರ್ ವೀರಗೌಡ ಬಿ.ಎಂ ಮಾತನಾಡಿ, ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಎಫ್‌ಎಂಡಿ ರೋಗ ಹೆಚ್ಚಾಗಿ ಹರಡಿದೆ ಎಂದು ಹೇಳಿದ್ದಾರೆ.

ಸೋಂಕಿತ ಜಾನುವಾರುಗಳಿರುವ ಸ್ಥಳದಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಜಾನುವಾರುಗಳಿಗೂ ಸರ್ಕಾರ ಲಸಿಕೆ ನೀಡುತ್ತಿರುವುದು ಉತ್ತಮವಾದ ಕೆಲಸ ಎಂದಿದ್ದಾರೆ.

No Comments

Leave A Comment