Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ವಿದ್ಯಾರ್ಥಿಗಳು, ಶಿಕ್ಷಕರಿಗೆ ಲಸಿಕೆ ನೀಡಿ ಬಳಿಕ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು: ಕಾಲೇಜು ಪುನರಾರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕೂ ಮುನ್ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಲಸಿಕೆ ನೀಡಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದೇವಿಶೆಟ್ಟಿ ನೇತೃತ್ವದ ಸಮಿತಿಯು ಶಾಲೆ,ಕಾಲೇಜು ಹಂತ ಹಂತವಾಗಿ ಆರಂಭಿಸಲು ಸಲಹೆ ನೀಡಿದೆ. ಹೀಗಾಗಿ ಶಿಕ್ಷಕರು ಹಾಗೂ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಿ ಕಾಲೇಜು ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಕಾಲೇಜು ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಶಾಲೆಗಳ ಪುನರಾರಂಭ ಕುರಿತು ಯಾವುದೇ ರೀತಿಯ ಚರ್ಚೆಗಳನ್ನೂ ಮಾಡಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಆದಷ್ಟು ಬೇಗ ಶಾಲಾ-ಕಾಲೇಜುಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಹೆಸರಾಂತ ವೈದ್ಯ ಡಾ.ದೇವಿಶೆಟ್ಟಿ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಶಾಲೆ-ಕಾಲೇಜು ಪ್ರಾರಂಭಿಸುವುದನ್ನು ತಡ ಮಾಡಿದರೆ ಮಕ್ಕಳಲ್ಲಿ ಅಪೌಷ್ಠಿಕತೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಭಿಕ್ಷಾಟನೆಯಂತಹ ಪಿಡುಗುಗಳು ಹೆಚ್ಚುತ್ತವೆ. ಇದು ಕೋವಿಡ್19 ನಿಂದಾಗುವ ಪರಿಣಾಮಗಳಿಗಿಂತ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆಯನ್ನು ನೀಡಿದೆ.

ಶಾಲೆ-ಕಾಲೇಜು ಆರಂಭಕ್ಕೂ ಮುನ್ನ ಪೋಷಕರು, ಶಿಕ್ಷಕರು, ಶಾಲಾ-ಆಡಳಿತ ಮಂಡಳಿಗಳು ಸೇರಿ ಸಂಬಂಧಿಸಿದ ಎಲ್ಲರೊಂದಿಗೆ ಚರ್ಚೆ ನಡೆಸಬೇಕು. ಸಾಧ್ಯವಾದಷ್ಟು ಶಾಲಾ-ಕಾಲೇಜು ಆರಂಭ ನಿರ್ಧಾರವನ್ನು ವಿಕೇಂದ್ರೀಕರಿಸಿ ಆಯಾ ಸ್ಥಳೀಯ ಸಂಸ್ಥೆಗಳು ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳಿಗೆ ಬಿಡಬೇಕು ಎಂದು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ವರದಿಯ ಪ್ರಮುಖ ಅಂಶಗಳು ಇಂತಿವೆ…

 • ದೈಹಿಕವಾಗಿ ಶಾಲೆಗೆ ಹಾಜರಾಗುವ ಎಲ್ಲಾ ಮಕ್ಕಳಿಗೆ ರೂ.2 ಲಕ್ಷವರೆಗಿನ ಕೋವಿಡ್-19 ಆರೋಗ್ಯ ವಿಮೆ ನೀಡುವುದು

 • ಶಾಲಾ ಮಕ್ಕಳಲ್ಲಿ ರೋಗ ನಿರೋಧಕ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

 • 18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು

 • ಚಾಮರಾಜನಗರ, ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ವೈದ್ಯಕೀಯ ಮೂಲಸೌಕರ್ಯ ಕೊರತೆಯಿದ್ದು ಹೀಗಾಗಿ ಈ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು.

 • ಹಾಗೆಯೇ ಮೂರನೇ ಅಲೆಯಿಂದ ಮಕ್ಕಳು ಹೆಚ್ಚು ಬಾಧಿತರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ 8 ಜಿಲ್ಲೆಗಳಲ್ಲಿ 250 ಹಾಸಿಗೆಗಳಿರುವ ಹಾಗೂ ಆ ಪೈಕಿ ಕನಿಷ್ಠ 20 ಐಸಿಯು ಬೆಡ್ ಗಳಿರುವ ಮಕ್ಕಳ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ಅಥವಾ ಮೆಡಿಕಲ್ ಕಾಲೇಜು ಆವರಣದಲ್ಲಿ ಸ್ಥಾಪಿಸಬೇಕು. ಉಳಿದ ಜಿಲ್ಲೆಗಳಲ್ಲಿಯೂ ಆಕ್ಸಿಜನ್ ಸೌಲಭ್ಯ ಇರುವ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

 • ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ: 10-25 (ಮೂರು ಹಂತ) ಪಿಐಸಿಯು ಹಾಸಿಗೆ ಮತ್ತು 25- 50 ಹಾಸಿಗೆ ಎಚ್‌ಡಿಯು, 10- 20 ಎನ್‌ಐಸಿಯು ಹಾಸಿಗೆ ಮತ್ತು ಉಳಿದ ಹಾಸಿಗೆಗಳಲ್ಲಿಯೂ ಆಮ್ಲಜನಕ ವ್ಯವಸ್ಥೆಗಳಿರುವಂತೆ ಮಾಡುವುದು.

 • ತಾಲ್ಲೂಕು ಮಟ್ಟದ ಆಸ್ಪತ್ರೆಯಲ್ಲಿ: 2 ಹಂತದಲ್ಲಿ 10-20 ಪಿಐಸಿಯು ಹಾಸಿಗೆ, 20-50 ಬೆಡ್ ಎಚ್‌ಡಿಯು ಉಳಿದಿರುವ ಹಾಸಿಗೆಗಳು ಆಮ್ಲಜನಕ ಸೌಲಭ್ಯ ಹೊಂದಿರುವಂತೆ ಮಾಡುವುದು.

 • ಮಕ್ಕಳಲ್ಲಿ ಸೋಂಕು ಉಲ್ಬಣಗೊಂಡಿದ್ದೇ ಆದರೆ, ಅಸ್ತಿತ್ವದಲ್ಲಿರುವ 10-20 ರಷ್ಟು ಎಂಐಸಿಯು/ವಾರ್ಡ್ ಹಾಸಿಗೆಗಳನ್ನು ನಿಗದಿಪಡಿಸುವುದು.

 • 24/7 ಲಸಿಕಾ ಕೇಂದ್ರಗಳನ್ನು ತೆರೆಯುವುದು.

 • ಎದುರಾಗುವ ಸಮಸ್ಯೆಗಳನ್ನು ತಡೆಯಲು ಕೋವಿನ್ ಅಪ್ಲಿಕೇಷನ್ ನಲ್ಲಿ ಸುಧಾರಣೆಗಳನ್ನು ತರುವುದು.

 • ಮಕ್ಕಳಿಗೆ ಪೌಷ್ಠಿಕಾಂಶವನ್ನು ಒದಗಿಸಲು ಕ್ಷೀರ ಭಾಗ್ಯ, ಮಧ್ಯಾಹ್ನ ಬಿಸಿಯೂಟ ಯೋಜನೆ

 • ವೈದ್ಯಕೀಯ ವೃತ್ತಿಪರರ ನೇಮಕಾತಿ

 • ಮುಂಚೂಣಿ ಕಾರ್ಯಕರ್ತರಿಗೆ ಶೀಘ್ರಗತಿಯಲ್ಲಿ ತರಬೇತಿ ನೀಡುವುದು.

 • ರಾಜ್ಯ ಮಟ್ಟದ ಲಸಿಕೆ ನೀತಿ ರೂಪಿಸುವುದು.

No Comments

Leave A Comment