Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕರ್ನಾಟಕದಲ್ಲಿ ಹಂತಹಂತವಾಗಿ ಶಾಲೆ ಆರಂಭಿಸುವುದು ಸೂಕ್ತ; ಆದರೆ, ಎಚ್ಚರಿಕೆ ತಪ್ಪಿದರೆ ಅಪಾಯವೂ ನಿಶ್ಚಿತ: ಡಾ.ದೇವಿಪ್ರಸಾದ್ ಶೆಟ್ಟಿ ಮಧ್ಯಂತರ ವರದಿ

ಬೆಂಗಳೂರು: ಕೊರೊನಾ ಮೂರನೇ ಅಲೆಯನ್ನು ತಡೆಗಟ್ಟಲು ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಕುರಿತಾಗಿ ಉನ್ನತ ಮಟ್ಟದ ನುರಿತ ತಜ್ಞರ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಹಾಗೂ ಇತರ ಸದಸ್ಯರು ಸಭೆ ನಡೆಸಿ, ಕರ್ನಾಟಕ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಇದರನ್ವಯ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಲಾಗಿದ್ದು, ಮಕ್ಕಳನ್ನು ಮೂರನೇ ಅಲೆಯಿಂದ ರಕ್ಷಿಸಲು ಏನು ಮಾಡಬೇಕು? (School Reopen) ಶಾಲೆ ಆರಂಭಿಸುವುದಾದರೆ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು? ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದುಬಂದಿದೆ.

ಕರ್ನಾಟಕ ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸುವುದಕ್ಕೆ ತಜ್ಞರಿಂದ ಸಲಹೆ ವ್ಯಕ್ತವಾಗಿದ್ದು, ಸಮ, ಬೆಸ ಮಾದರಿಯಲ್ಲಿ ತರಗತಿಗಳನ್ನು ಆರಂಭಿಸುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ. ಮೊದಲ ಹಂತದಲ್ಲಿ ಕಾಲೇಜುಗಳನ್ನು ಆರಂಭಿಸುವುದು, ಎರಡನೇ ಹಂತದಲ್ಲಿ 8ರಿಂದ 10ನೇ ತರಗತಿಗೆ ಶಾಲೆ ಆರಂಭಿಸುವುದು ಹಾಗೂ ಮೂರನೇ ಹಂತದಲ್ಲಿ 5ರಿಂದ 7ನೇ ತರಗತಿಗಳನ್ನು ಆರಂಭಿಸುವುದು ಸೂಕ್ತ ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ಶಾಲಾ ಕಾಲೇಜಿನಲ್ಲಿ ಕೊರೊನಾ ನಿಯಮಾವಳಿಗಳು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕ ಸರ್ಕಾರವೇ ಮಾಸ್ಕ್ ನೀಡಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶಿಕ್ಷಕರು, ಶಾಲೆಯ ಇತರೆ ಸಿಬ್ಬಂದಿಗೆ ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿರಬೇಕು. ಆರೋಗ್ಯವಂತ ಮಕ್ಕಳು ಮಾತ್ರ ಶಾಲೆಗೆ ಬರಬೇಕು. ಶಾಲಾ ಆವರಣಕ್ಕೆ ಅನ್ಯರಿಗೆ ಪ್ರವೇಶ ನಿರ್ಬಂಧ ಹೇರಬೇಕು. ವಾರಕ್ಕೊಮ್ಮೆ ಸ್ಥಳೀಯ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಬೇಕು. ಮಕ್ಕಳಿಗೆ ಕರ್ನಾಟಕ ಸರ್ಕಾರವೇ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಆವರಣ, ಸುತ್ತಮುತ್ತ ತಿಂಡಿ ತಿನಿಸು ಮಾರಾಟ ನಿಷೇಧ ಮಾಡಬೇಕು. ಕೊರೊನಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಟ ಆಡಿಸಬೇಕು. ಮಕ್ಕಳಿಗೆ ಸರ್ಕಾರದಿಂದ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಊಟವನ್ನು ಸ್ಥಳೀಯ ಮಟ್ಟದಲ್ಲಿ ನೀಡುವುದು ಸೂಕ್ತ ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ.

ಪೋಷಕರು ಸಮ್ಮತಿಸಿದರೆ ಮಾತ್ರ ಮಕ್ಕಳನ್ನ ಶಾಲೆಗೆ ಕರೆತರಬೇಕು. ಮಕ್ಕಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಆನ್‌ಲೈನ್, ಆಫ್‌ಲೈನ್ 2 ಮಾದರಿಯ ಕಲಿಕೆಗೂ ಅವಕಾಶ ನೀಡಬೇಕು ಎನ್ನುವುದನ್ನೂ ತಜ್ಞರು ಪ್ರತಿಪಾದಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ವರದಿ ಸಲ್ಲಿಕೆ ಮಾಡಲಾಗಿದ್ದು, ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಿಕೊಂಡು ಶಾಲಾ,ಕಾಲೇಜು ಆರಂಭಿಸುವುದು ಹೇಗೆ ಎಂಬ ಬಗ್ಗೆ ತಿಳಿಸಲಾಗಿದೆ.

ಶಾಲೆ ಆರಂಭಿಸಲು ಸಲಹೆ ನೀಡಿರುವ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯು ಶಿಕ್ಷಕರಿಗೆ ಕಡ್ಡಾಯವಾಗಿ 2 ಡೋಸ್ ಲಸಿಕೆ ನೀಡಿರಬೇಕು ಎಂದು ಹೇಳುವುದರ ಜತೆಗೆ, ಮಕ್ಕಳ ಪೋಷಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು ಹಾಗೂ ಮಕ್ಕಳ ಸಂಪರ್ಕಕ್ಕೆ ಬರುವ ಶಾಲಾ ಸಿಬ್ಬಂದಿ ಎಲ್ಲರಿಗೂ ಲಸಿಕೆ ನೀಡಬೇಕು ಎನ್ನುವುದನ್ನೂ ಪ್ರಸ್ತಾಪಿಸಿದೆ. ಶಾಲೆಗಳನ್ನು ಪ್ರದೇಶವಾರು ಹಂತ ಹಂತವಾಗಿ ಆರಂಭಿಸಬೇಕು. ಶಾಲೆಗಳಲ್ಲಿ ದೈಹಿಕ ಅಂತರಕ್ಕೆ ಮೊದಲ ಆದ್ಯತೆ ನೀಡುವುದರೊಂದಿಗೆ ವಿದ್ಯಾರ್ಥಿಗಳು ಒಬ್ಬರ ವಸ್ತು ಇನ್ನೊಬ್ಬರು ಮುಟ್ಟದಂತೆ ನಿಗಾ ವಹಿಸಬೇಕು ಎನ್ನುವುದನ್ನೂ ತಿಳಿಸಿದ್ದಾರೆ.

ದಿನದಲ್ಲಿ 2ರಿಂದ 3 ಗಂಟೆ ಮಾತ್ರ ತರಗತಿ ನಡೆಸಬೇಕು. ರಾಜ್ಯದಲ್ಲಿ 18 ವರ್ಷದೊಳಗಿನ 2.38 ಕೋಟಿ ಮಕ್ಕಳಿದ್ದಾರೆ. 12ರಿಂದ 18 ವರ್ಷದ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ನೀಡುವುದಕ್ಕೆ ಅನುಮೋದನೆ ಕೊಡುವುದು ಉತ್ತಮ. ಈ ನಿಯಮ ಪಾಲಿಸದಿದ್ದರೆ ಮಕ್ಕಳಿಗೆ ಕೊರೊನಾ 3ನೇ ಅಲೆಯಲ್ಲಿ ಹೆಚ್ಚು ಅಪಾಯ ಆಗಬಹುದು, 3.40 ಲಕ್ಷ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಸುಮಾರು 6,801 ICU, HDU, ವೆಂಟಿಲೇಟರ್ ಬೆಡ್, 23,804 ಸಾಮಾನ್ಯ ಬೆಡ್‌ಗಳು ಬೇಕಾಗಬಹುದು. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ 43,000 ಬೆಡ್ ಅಗತ್ಯ ಎಂದು ಮಧ್ಯಂತರ ವರದಿಯಲ್ಲಿ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯು ಸಲಹೆ ನೀಡಿರುವುದು ತಿಳಿದುಬಂದಿದೆ.

ಮಕ್ಕಳಿಗೆ ಕೊರೊನಾ ಬಂದರೆ ಪ್ರತ್ಯೇಕವಾಗಿರಿಸಲು ಬಾಲ ಆರೈಕೆ ಸುರಕ್ಷಾ ಕೇಂದ್ರದ ವ್ಯವಸ್ಥೆ ಮಾಡಬೇಕು. ಅದರಲ್ಲಿ ತಾಯಿ-ಮಗು ಒಟ್ಟಾಗಿ ಇರುವುದಕ್ಕೆ ವ್ಯವಸ್ಥೆ ಮಾಡಬೇಕು. ಆರೈಕೆ ಕೇಂದ್ರದಲ್ಲಿ ಮಕ್ಕಳಿಗೆ ಆಟವಾಡುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಪ್ರೌಢಾವಸ್ಥೆಗೆ ಬಂದ ಗಂಡು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಬೇಕು. ಮಕ್ಕಳು ಮನೆ ಊಟ ಕೇಳಿದರೆ ನೀಡಬೇಕು ಎಂದು ಸಲಹೆ ನೀಡಲಾಗಿದೆ.

ಜತೆಗೆ, ವೈದ್ಯರು-ದಾದಿಯರ ಕೊರತೆ ನೀಗಿಸುವುದು, ಆಸ್ಪತ್ರೆಗಳಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ಹಾಗೂ ಆಮ್ಲಜನಕ ಸೇರಿದಂತೆ ಮೂಲಭೂತ ಅವಶ್ಯಕತೆಗಳ ಬಗ್ಗೆ ಗಮನ ಹರಿಸುವುದಕ್ಕೂ ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ, ಈಗಾಗಲೇ ಅನುಸರಿಸಿರುವ ಅನ್​ಲಾಕ್​ ಕ್ರಮ ಸರಿ ಇದೆ. ಮುಂದೆ ಲಸಿಕೆ ವಿತರಣೆ ಹೆಚ್ಚಿಸಿ ಹೆಜ್ಜೆ ಇಡುವುದರತ್ತ ಗಮನ ಹರಿಸಿ ಎಂಬುದನ್ನೂ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸುದ್ದಿಗೋಷ್ಠಿ ವೇಳೆ ಪ್ರಸ್ತಾಪಿಸಿದ್ದಾರೆ.

No Comments

Leave A Comment