Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಬಂಟ್ವಾಳ: ‘ಯಾವುದೇ ಗೊಂದಲ ,ಅಪಸ್ವರಕ್ಕೆ ಅವಕಾಶವಿಲ್ಲ,ಕೊರೊನಾ ನಿರ್ವಹಣೆಗಷ್ಠ ಗಮನ’ – ನಳಿನ್

ಬಂಟ್ವಾಳ: ಜನರು ಆರ್ಶೀವಾದ ಮಾಡಿರುವುದು ಸಮಾಜದ ಕಾರ್ಯಕ್ಕೆ, ಈ ಹಿನ್ನಲೆಯಲ್ಲಿ ಮಂತ್ರಿಗಳು, ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿದ್ದುಕೊಂಡು ಸೇವಾ ಕಾರ್ಯದ ಮೂಲಕ ಜನರ ಪ್ರಾಣರಕ್ಷಿಸಬೇಕು, ಕೊರೊನಾ ಮೂರನೇ ಅಲೆಯ ನಿಗ್ರಹಕ್ಕೆ ಪೂರ್ವಸಿದ್ದತೆ ಮಾಡಬೇಕು ಅದುಬಿಟ್ಟು ಯಾವುದೇ ಗೊಂದಲ, ಅಪಸ್ವರಕ್ಕೆ ಅವಕಾಶವಿಲ್ಲ ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ಕುರಿತು ಬಂಟ್ವಾಳ ಕ್ಷೇತ್ರದ ವಾಮದಪದವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದ.ಕ.ಜಿಲ್ಲೆಯಲ್ಲೆ ಮೊದಲಿಗೆ ನಿರ್ಮಾಣಗೊಂಡು ಲೋಕಾರ್ಪಣೆಯಾದ ಆಕ್ಸಿಜನ್ ಉತ್ಪಾದನ ಘಟಕದ ಉದ್ಘಾಟನೆಯ ಬಳಿಕ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗ ಮಾತನಾಡಿದ ಅವರು, “ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತವರ ತಂಡ ಕೊರೊನಾ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದು, ಮಂತ್ರಿಗಳು ತಮಗೆ ಉಸ್ತುವಾರಿ ನೀಡಿರುವ ಜಿಲ್ಲೆಯಲ್ಲಿದ್ದುಕೊಂಡು ಮತ್ತು ಶಾಸಕರು ಕೂಡ ತಮ್ಮ ಕ್ಷೇತ್ರದಲ್ಲಿದ್ದು ಕೊರೊನಾ ನಿರ್ವಹಣೆಯ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ” ಎಂದರು.

ಇನ್ನು ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವ ದೆಸೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಪಕ್ಷದ ಪ್ರಮುಖರ ಸಭೆ ನಡೆಸಲಾಗಿದ್ದು, ಕಳೆದ ಗ್ರಾಮ ಪಂಚಾಯತ್ ಚುನಾವಣೆಯ ವೇಳೆ ಗ್ರಾಮಸ್ವರಾಜ್ ಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಆ ಮೂಲಕ ಪಕ್ಷದ ಬೆಂಬಲಿತರು ಅತ್ಯಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದರು” ಎಂದಿದ್ದಾರೆ.

“ಕೊರೊನ ಎರಡನೇ ಅಲೆಯ ಲಾಕ್ ಡೌನ್ ತೆರವಾಗಿ ಸಾಮಾನ್ಯ ಪರಿಸ್ಥಿತಿಗೆ ಬಂದ ಬಳಿಕ ಮಂತ್ರಿಗಳ ತಮ್ಮ ಜಿಲ್ಲೆಯಲ್ಲಿ ಪ್ರವಾಸ ಮಾಡುವುದಲ್ಲದೆ ಬೂತ್ ಮಟ್ಟದಲ್ಲಿ ಸಮಾವೇಶವನ್ನು ಸಂಘಟಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡುವುದು ಮೊದಲಾದ ಕಾರ್ಯತಂತ್ರ ಮಾಡಲಾಗಿದೆ” ಎಂದರು.

ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದಿಂದ ಪುಂಜಾಲಕಟ್ಟೆಯವರೆಗಿನ ದ್ವಿಪಥ ರಸ್ತೆ ಕಾಮಗಾರಿ ಕೊರೊನಾ, ಮಳೆ, ಪೈಪ್ ಲೈನ್ ಅಳವಡಿಕೆಯಿಂದ ಕೊಂಚ ವಿಳಂಬವಾಗಿದ್ದು, ಆಕ್ಟೋಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ ಸಂಸದ ನಳಿನ್ ಕುಮಾರ್ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಸರಕಾರದಿಂದ ಈಗಾಗಲೇ ಅನುಮೋದನೆ ಸಿಕ್ಕಿದೆ ಎಂದಿದ್ದಾರೆ.

ಹಾಗೆಯೇ ಬಿ.ಸಿ.ರೋಡ್- ಅಡ್ಡಹೊಳೆ ರಸ್ತೆ ಕಾಮಗಾರಿ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದ್ದು, ಇದೀಗ ಮರು ಟೆಂಡರ್ ಪೂರ್ಣಗೊಂಡು ಶಿರಾಡಿ ಭಾಗದಿಂದ ಈಗಾಗಲೇ ಕಾಮಗಾರಿಯು ಆರಂಭವಾಗಿದೆ 2023 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ,ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ,ಪ್ರಮುಖರಾದ ಡೊಂಬಯ ಅರಳ,ರವೀಶ್ ಕರ್ಕಳ,ಮಾಧವ ಮಾವೆ,ರಮಾನಾಥ ರಾಯಿ,ಪುರುಷೋತ್ತಮ ಶೆಟ್ಟಿ,ಗಣೇಶ್ ರೈ ಮಾಣಿ ,ಪ್ರದೀಪ್ ಅಜ್ಜಿಬೆಟ್ಟು ಮೊದಲಾದವರಿದ್ದರು.

No Comments

Leave A Comment