Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ನಾರದಾ ಪ್ರಕರಣ: ಬಂಧಿತ ಟಿಎಂಸಿ ಶಾಸಕ ಮದನ್ ಮಿತ್ರಾ, ಪಕ್ಷದ ಮಾಜಿ ನಾಯಕ ಸೋವನ್ ಚಟರ್ಜಿ ಆಸ್ಪತ್ರೆಗೆ ದಾಖಲು

ಕೋಲ್ಕತಾ: ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಂಧಿಸಿರುವ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಮತ್ತು ಪಕ್ಷದ ಮಾಜಿ ನಾಯಕ ಸೋವನ್ ಚಟರ್ಜಿ ಅವರನ್ನು ಮಂಗಳವಾರ ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರೂ ರಾಜಕಾರಣಿಗಳು ಉಸಿರಾಟದ ಸಮಸ್ಯೆ ಕುರಿತು ಮಾಹಿತಿ ನೀಡಿದ್ದರಿಂದಾಗಿ ಅವರನ್ನು ಎಸ್‌ಎಸ್‌ಕೆಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಇಬ್ಬರು ಹಿರಿಯ ಮಂತ್ರಿಗಳಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಅವರನ್ನು ಸಿಬಿಐ  ಬಂಧಿಸಿತ್ತು. ನಾಲ್ವರನ್ನು ಸೋಮವಾರ ತಡರಾತ್ರಿ ಕೋಲ್ಕತ್ತಾದ ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂಗೆ ಕರೆದೊಯ್ಯಲಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರೊಬ್ಬರು, ‘ಮದನ್ ಮಿತ್ರಾ ಮತ್ತು ಸೋವನ್ ಚಟರ್ಜಿ ಅವರನ್ನು ಇಂದು ಮುಂಜಾನೆ 3 ಗಂಟೆ ಸುಮಾರಿನಲ್ಲಿ ಆಸ್ಪತ್ರೆ ಕರೆತರಲಾಗಿತ್ತು. ಇಬ್ಬರೂ ಉಸಿರಾಟದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಯ ವುಡ್‌ಬರ್ನ್ ವಾರ್ಡ್‌ನಲ್ಲಿ ಆಮ್ಲಜನಕದ ಬೆಂಬಲದಲ್ಲಿ  ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂನಲ್ಲಿದ್ದ ಮುಖರ್ಜಿ ಅವರಿಗೆ ಇದಕ್ಕೂ ಮೊದಲೇ ಅನಾರೋಗ್ಯ ಸಮಸ್ಯೆ ಕಾಡಿತ್ತು. ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಅವರು ಆಸ್ಪತ್ರೆಗೆ ದಾಖಲಾಗದು ಇಷ್ಟಪಡದೇ ಇದ್ದುದರಿಂದ ಅವರನ್ನು ಮತ್ತೆ ಜೈಲಿಗೆ ವಾಪಸ್ ಕರೆದೊಯ್ಯಲಾಗಿತ್ತು. ಆದರೆ  ತಡರಾತ್ರಿಯಲ್ಲಿ ಮತ್ತೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಫಿರ್ಹಾದ್ ಹಕೀಮ್ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಬಂಧಿತ ಇಬ್ಬರು ರಾಜಕೀಯ ಮುಖಂಡರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ ನಂತರ,  ಕೋಲ್ಕತಾ ಪೊಲೀಸ್ ಸಿಬ್ಬಂದಿಗಳ ಭದ್ರತೆಗೆ ಅಲ್ಲಿ ನಿಯೋಜಿಸಲಾಗಿದೆ.

ಈ ಹಿಂದೆ ನಾರದಾ ಪ್ರಕರಣದಲ್ಲಿ ಸಿಬಿಐಯಿಂದ ಬಂಧಿಸಲ್ಪಟ್ಟ ಮತ್ತು ಚಾರ್ಜ್‌ಶೀಟ್ ಪಡೆದ ನಾಲ್ವರಿಗೆ ಜಾಮೀನು ನೀಡುವ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪನ್ನು ಕೊಲ್ಕತ್ತಾ ಹೈಕೋರ್ಟ್ ತಡೆಹಿಡಿದಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ‘ವಿಶೇಷ ನ್ಯಾಯಾಲಯದ ಆದೇಶವನ್ನು  ತಡೆಹಿಡಿಯುವುದು ಸೂಕ್ತವೆಂದು ಪರಿಗಣಿಸಲಾಗಿದೆ. ಅಂತೆಯೇ ಅವರನ್ನು “ಮುಂದಿನ ಆದೇಶದವರೆಗೆ ನ್ಯಾಯಾಂಗ ಬಂಧನದಲ್ಲಿಡಬೇಕೆಂದು” ನಿರ್ದೇಶಿಸಲಾಗುವುದು ಎಂದು ವಿಭಾಗೀಯ ನ್ಯಾಯಪೀಠ ಹೇಳಿತ್ತು.

ಏನಿದು ಪ್ರಕರಣ?
ವೆಬ್ ಪೋರ್ಟಲ್‌ ನಾರದಾ ನ್ಯೂಸ್‌ನ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರು ಈ ಕುಟುಕು ಕಾರ್ಯಾಚರಣೆಯನ್ನು 2014 ರಲ್ಲಿ ನಡೆಸಿದ್ದರು, ಇದರಲ್ಲಿ ಟಿಎಂಸಿ ಮಂತ್ರಿಗಳು, ಸಂಸದರು ಮತ್ತು ಶಾಸಕರು ಕಾಲ್ಪನಿಕ ಕಂಪನಿಯ ಪ್ರತಿನಿಧಿಗಳಿಂದ ಹಣವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಪಶ್ಚಿಮ  ಬಂಗಾಳದಲ್ಲಿ 2016 ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಈ ಟೇಪ್‌ಗಳನ್ನು ಬಹಿರಂಗಪಡಿಸಲಾಗಿತ್ತು. ಕೋಲ್ಕತ್ತಾ ಹೈಕೋರ್ಟ್ 2017 ರ ಮಾರ್ಚ್‌ನಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು.

No Comments

Leave A Comment