Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮಂಗಳೂರು ಕಡಲ ತೀರದಲ್ಲಿ ಟೌಕ್ಟೇ ಚಂಡಮಾರುತ ಅಬ್ಬರಕ್ಕೆ ಸಿಲುಕಿದ್ದ 9 ಮಂದಿಯ ರಕ್ಷಣೆ: ನೌಕಾಪಡೆ ಸಿಬ್ಬಂದಿಗೆ ಮುಖ್ಯಮಂತ್ರಿ ಧನ್ಯವಾದ

ಮಂಗಳೂರು: ಟೌಕ್ಟೇ ಚಂಡಮಾರುತದ ಅಬ್ಬರದ ಅಲೆಗೆ ಸಿಲುಕಿ ಮಂಗಳೂರು ತೀರದ ಮೂಲ್ಕಿ ಬಳಿ ಕಲ್ಲುಬಂಡೆಯ ಪಕ್ಕ ದೋಣಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ 9 ಮಂದಿಯನ್ನು ಭಾರತೀಯ ನೌಕಾಪಡೆ ಸಿಬ್ಬಂದಿ ಸೋಮವಾರ ಬೆಳಗ್ಗೆ ರಕ್ಷಿಸಿದ್ದಾರೆ.

ನೌಕಾಪಡೆಯ ಹೆಲಿಕಾಪ್ಟರ್ ಮತ್ತು ಹಡಗಿನ ನೆರವಿನಿಂದ ಸಿಕ್ಕಿಹಾಕಿಕೊಂಡಿದ್ದವರನ್ನು ಒಂದು ದಿನವಿಡೀ ಕಾರ್ಯಾಚರಣೆ ನಡೆಸಿ ಕಾಪಾಡಿದ್ದಾರೆ ಎಂದು ಕರ್ನಾಟಕ ಕರಾವಳಿ ಪಡೆಯ ಡಿಐಜಿ ಎಸ್ ಬಿ ವೆಂಕಟೇಶ್ ತಿಳಿಸಿದ್ದಾರೆ.

ಎನ್‌ಎಮ್‌ಪಿಟಿಯಲ್ಲಿ ಲಂಗರು ಹಾಕಿದ್ದ ಹಡಗು ನಿನ್ನೆ ಬೆಳಗ್ಗೆಯೇ ಟೌಕ್ಟೇ ಚಂಡಮಾರುತದಿಂದ ಉಂಟಾದ ಹೆಚ್ಚಿನ ಉಬ್ಬರವಿಳಿತದಲ್ಲಿ ಸಿಲುಕಿದ ನಂತರ ಚಲಿಸಿತ್ತು. ನಂತರ ಸ್ವಲ್ಪ ದೂರ ಹೋಗಿ ಸಿಕ್ಕಿ ಹಾಕಿಕೊಂಡಿದ್ದು ಮೂಲ್ಕಿ ಬಳಿ ಬಂಡೆಯಲ್ಲಿ. ಸಿಕ್ಕಿಹಾಕಿಕೊಂಡವರ ಬಳಿ ಅದೃಷ್ಟವಶಾತ್ ತಿನ್ನಲು ಪದಾರ್ಥ ಮತ್ತು ನೀರುಗಳಿದ್ದವು.

ನಿನ್ನೆ ಚಂಡಮಾರುತದ ಭಾರೀ ಗಾಳಿ, ಅಲೆಗಳಿಂದಾಗಿ ರಕ್ಷಣಾ ಸಿಬ್ಬಂದಿಗೆ ಕಾರ್ಯಾಚರಣೆಗೆ ಇಳಿಯಲು ಸಾಧ್ಯವಾಗಿರಲಿಲ್ಲ. ಸುದ್ದಿ ಗೊತ್ತಾದ ಕೂಡಲೇ ರಾಜ್ಯ ಸರ್ಕಾರ ನೌಕಾಪಡೆಗೆ ಮನವಿ ಮಾಡಿಕೊಂಡಿತ್ತು, ಅದು ಗೋವಾದಿಂದ ಹೆಲಿಕಾಪ್ಟರ್ ತರಿಸಿ ರಕ್ಷಣಾ ಕಾರ್ಯಕ್ಕಿಳಿಯಿತು.

ಈ ಮಧ್ಯೆ, ಟಗ್ ಬೋಟ್ ಮಗುಚಿ ಕಾಣೆಯಾದ ಮೂವರು ಇನ್ನೂ ಸಿಕ್ಕಿಲ್ಲ. ದೋಣಿಯಲ್ಲಿ ಒಟ್ಟು 8 ಮಂದಿಯಿದ್ದರು. ಅವರಲ್ಲಿ ಇಬ್ಬರು ಮೃತಪಟ್ಟರೆ, ಮೂವರು ಈಜಿ ಹೇಗೋ ದಡ ಸೇರಿ ಬಚಾವಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು ಕರಾವಳಿ ಭದ್ರತಾ ಪಡೆ ಡಿಐಜಿ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿ ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಮುಖ್ಯಮಂತ್ರಿ ಅಭಿನಂದನೆ: ಅರಬ್ಬೀ ಸಮುದ್ರದಲ್ಲಿ ಟಗ್ ನಲ್ಲಿ ಸಿಲುಕಿದ್ದ 9 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್ ಹಾಗೂ ನೌಕಾಪಡೆಗೆ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

No Comments

Leave A Comment