ನಾಪತ್ತೆಯಾಗಿರುವ ಕಾರ್ಮಿಕರು ಕಾಪು ಬಳಿ ಬ೦ಡೆಯಲ್ಲಿ ಸಿಲಿಕಿದ್ದಾರೆ-ರಕ್ಷಣಾ ಕಾರ್ಯ ಚುರುಕು
ಕಾಪು ಮೇ.16: ಕಾಪು ಸಮೀಪದ ಕಾಣ ಬಳಿ ಟಗ್ ವೊಂದು ಕಲ್ಲಿಗೆ ಡಿಕ್ಕಿ ಹೊಡೆದು 9 ಜನ ಸಿಬ್ಬಂದಿಗಳು ಅಪಾಯದಲ್ಲಿರುವ ಘಟನೆ ನಡೆದಿದೆ.
ನವಮಂಗಳೂರು ಬಂದರಿನ ಹೊರವಲಯದಲ್ಲಿ ಮೂರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋರಂಗಲ ಆಪರೇಷನ್ ಮೈನ್ ಟಗ್ ಇದಾಗಿದೆ.
ಟಗ್ ನಲ್ಲಿ 9 ಮಂದಿ ಸಿಬ್ಬಂದಿ ಗಳು ಹಾಗೂ ಅಪಾರ ಪ್ರಮಾಣದ ಡೀಸೆಲ್ ಆಯಿಲ್ ಇದೆ ಎಂದು ತಿಳಿದು ಬಂದಿದೆ.
ದೂರದ ಸಮುದ್ರದಲ್ಲಿ ಮೂರಿಂಗ್ ಸೆಂಟರ್ ಇದ್ದು ತೈಲ ಕಚ್ಚಾ ಸರಕು ಹೊತ್ತು ತರುವ ಬೃಹತ್ ಹಡಗುಗಳಿಗೆ ಈ ಟಗ್ ಗಳು ನೆರವು ನೀಡುವ ಕೆಲಸ ಮಾಡುತ್ತಿದೆ.
ಈ ಟಗ್ ಗುತ್ತಿಗೆ ಕಂಪನಿಯ ಗುತ್ತಿಗೆ ಕೊನೆಗೊಂಡಿದ್ದು, ನವಮಂಗಳೂರು ಬಂದರಿನ ಹೊರ ವಲಯದಲ್ಲಿ ಲ೦ಗರ್ ಹಾಕುವಂತೆ ಬಂದರು ಮಂಡಳಿಯಿಂದ ಸೂಚಿಸಲಾಗಿತ್ತು. ಚಂಡಮಾರುತ ಹಿನ್ನೆಲೆ ಬೀಸಿರುವ ಗಾಳಿಯ ರಭಸಕ್ಕೆ ಆಂಕರ್ ತುಂಡಾಗಿ ಇದೀಗ ಟಗ್ ಅಪಘಾತಕ್ಕೀಡಾಗಿದೆ.
ಇನ್ನು ಅಪಾಯದಲ್ಲಿ ಇರುವ ಟಗ್ ಹಾಗೂ ಸಿಬ್ಬಂದಿ ಗಳನ್ನು ರಕ್ಷಿಸುವ ಸಲುವಾಗಿ ಕರಾವಳಿ ಕಾವಲು ಪಡೆ ಎಸ್ ಐ ಸುಜಾತ, ಕಾಪ್ ಎಸ್ ಐ ರಾಘವೇಂದ್ರ ಸಿ, ಕಾಪು ಕ್ರೈಂ ಎಸ್ ಐ ತಿಪ್ಪೇಶ್, ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಬೋಟ್ ಗೆ ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳು, ಕಾಪು ಲೈಟ್ ಹೌಸ್ ಬಳಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.