ಮಸ್ಕಿಯಲ್ಲಿ ಕಾಂಗ್ರೆಸ್ಗೆ ಗೆಲುವು – ವಿಶ್ವಾಸದ್ರೋಹವಾಗಿದೆ ಎಂದ ಬಿಜೆಪಿ ಅಭ್ಯರ್ಥಿ
ಮಸ್ಕಿ: ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಾಳ ಗೆಲುವು ಬಹುತೇಕ ನಿಶ್ಚಯವಾಗಿದ್ದು, ಇತ್ತ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಪ್ರತಾಪ್ ಗೌಡ ಪಾಟೀಲ್ಗೆ ತೀರ ಮುಖಭಂಗವಾಗಿದೆ.
ಈ ಕುರಿತು ಫಲಿತಾಂಶ ಹೊರಬೀಳುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್, “ನನಗೆ ಗೆಲ್ಲುತ್ತೇನೆ ಎಂದುಕೊಂಡಿದ್ದೆ, ಆದರೆ ವಿಶ್ವಾಸದ್ರೋಹವಾಗಿದೆ. ಅಭಿವೃದ್ಧಿ, ಒಳ್ಳೆತನ ಮುಖ್ಯವಲ್ಲ ಎಂದು ಜನ ಸಾಬೀತು ಮಾಡಿದ್ದಾರೆ” ಎಂದರು.
“ಜನರು ಬದಲಾವಣೆ ಬಯಸಿದ್ದು, ಕಾಂಗ್ರೆಸ್ನ ಬಸವನಗೌಡ ತುರುವಿಹಾಳಗೆ ಮತಹಾಕಿದ್ದಾರೆ. ಕ್ಷೇತ್ರದ ಜನತೆಗೆ ದೇವರು ಒಳ್ಳೆಯದು ಮಾಡಲಿ, ಜನರ ಮನಸ್ಥಿತಿಯಲ್ಲಿ ಸೋಲಿಸಬೇಕೆಂಬುದು ಬಂದಾಗ ಯಾರು ಬಂದು ಏನೇ ಪ್ರಚಾರ ಮಾಡಿದರೂ ಏನೂ ಪ್ರಯೋಜನ ಆಗಲ್ಲ” ಎಂದಿದ್ದಾರೆ.
ಇನ್ನು “ನಾನು ಜಯಗಳಿಸದಿದ್ದರು ಪಕ್ಷದ ಕಾರ್ಯಕರ್ತನಾಗಿ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.