Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ಕೋವಿಡ್-19: ಸತ್ತ ನಂತರವೂ ತೀರದ ಸಂಕಷ್ಟ; ಮೃತ ದೇಹ ದಹಿಸಲು ವಿಳಂಬ, ಸಂಬಂಧಿಕರ ಪರದಾಟ

ಬೆಂಗಳೂರು: ಸೂಕ್ತ ಸಮಯಕ್ಕೆ ಹಾಸಿಗೆ, ಚಿಕಿತ್ಸೆ ಆಕ್ಸಿಜನ್ ಸಿಗದೆ ನಗರದಲ್ಲಿ ಕೊರೋನಾ ಸೋಂಕಿತರು ನರಳಾಡುತ್ತಿದ್ದು, ಸತ್ತ ನಂತರ ಕೂಡ ಸಂಕಷ್ಟಗಳು ತೀರದಂತಾಗಿದೆ. ಸರ್ಕಾರ ಎಷ್ಟೇ ಸಮರ್ಥನೆಗಳನ್ನು ನೀಡುತ್ತಿದ್ದರೂ ನಗರದಲ್ಲಿ ಸೋಂಕಿತರ ಶವ ಸಂಸ್ಕಾರಕ್ಕಾಗಿ ಕುಟುಂಬಸ್ಥರು ಚಿತಾಗಾರಗಳ ಬಳಿ ಪರದಾಡುವ ಸ್ಥಿತಿ ಮಾತ್ರ ಇನ್ನೂ ಮುಂದವರೆದಿದೆ.

ನಗರದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ಸೋಂಕು ಪ್ರಕರಣಗಳು ಹೆಚ್ಚಳದ ಜೊತೆಗೆ ಸೋಂಕಿತ ಸಾವಿನ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ಹೀಗಾಗಿ ಚಿತಾಗಾರಗಳಲ್ಲಿ ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆ ಸವಾಲಾಗಿ ಪರಿಣಮಿಸಿದೆ.

ಇಡೀ ದಿನ ಮೃತದೇಹಗಳ ದಹನ ಕಾರ್ಯ ಮಾಡಿದರೂ ಚಿತಾಗಾರಗಳ ಬಳಿ ಶವಗಳ ದಟ್ಟಣ ಉಂಟಾಗುತ್ತಿದೆ. ಮೃತದೇಹಗಳ ಹೊತ್ತು ತರುವ ಆ್ಯಂಬುಲೆನ್ಸ್ ಗಳ ಸಾಲು ದೊಡ್ಡದಾಗುತ್ತಿದೆ. ಶವ ಸಂಸ್ಕಾರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಇಡೀ ದಿನ ಚಿತಾಗಾರಗಳ ಬಳಿಯೇ ಗೋಳಾಡಿ ಕಣ್ಣೀರಿಡುವ ಸ್ಥಿತಿ ಮುಂದುವರೆದಿದೆ.

ಕೊರೋನಾ 2ನೇ ಅಲೆ ಆರಂಭವಾಗಾದಿನಿಂದ ನಗರದ ಚಿತಾಗಾರಗಳಲ್ಲಿ ಶವ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಒಂದೊಂದು ಶವದ ಅಂತ್ಯಕ್ರಿಯೆಗೆ ಕನಿಷ್ಟ 6 ತಾಸು ಕಾದು ಕೂರುವಂತಾಗಿದೆ. ಚಿತಾಗಾರದ ಸಿಬ್ಬಂದಿ ತಡರಾತ್ರಿವರೆಗೂ ಮೃತದೇಹಗಳ ಅಂತ್ಯಕ್ರಿಯೆ ಕಾರ್ಯ ನೆರವೇರಿಸುತ್ತಿದ್ದಾರೆ. ಆದರೆ, ಬೆಳಿಗ್ಗೆ ಮತ್ತೆ ಚಿತಾಗಾರಗಳ ಬಳಿ ಶವಹೊತ್ತ ಆ್ಯಂಬುಲೆನ್ಸ್ ಗಳು ಸಾಲುಗಟ್ಟಿ ನಿಲ್ಲುತ್ತಿವೆ.

ಮೇಡಿ ಅಗ್ರಹಾರ, ಬನಶಂಕರಿ, ಪೀಣ್ಯ, ಸುಮ್ಮನಹಳ್ಳಿ, ಬೊಮ್ಮನಹಳ್ಳಿ, ಚಾಮರಾಜಪೇಟೆ ಮೊದಲಾದ ಚಿತಾಗಾರಗಳ ಬಳಿ ಶನಿವಾರ ಬೆಳಿಗ್ಗೆ 6 ಗಂಟೆಗೆ ಆ್ಯಂಬುಲೆನ್ಸ್ ಗಳ ದೊಡ್ಡ ಸಾಲು ಕಂಡು ಬಂದಿತು. ಒಂದೊಂದು ಚಿತಾಗಾರದಲ್ಲಿ ನಿತ್ಯ ಸುಮಾರು 15ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಒಂದೊಂದು ಮೃತದೇಹ ಅಂತ್ಯಕ್ರಿಯೆಗೆ ಸುಮಾರು ಒಂದೂವರೆ ತಾಸು ಹಿಡಿಯುತ್ತಿದೆ. ಮಧ್ಯಾಹ್ನದ ಬಳಿಕ ಚಿತಾಗಾರಕ್ಕೆ ಬರುವ ಮೃತದೇಹಗಳ ಅಂತ್ಯಕ್ರಿಯೆ ತಡರಾತ್ರಿವರೆಗೂ ನಡೆಯುತ್ತಿದೆ. ಹೀಗಾಗಿ ಮೃತರ ಸಂಬಂಧಿಕರು ತಾಸುಗಟ್ಟಲೇ ಚಿತಾಗಾರಗಳ ಬಳಿ ಕಾಯಬೇಕಾಗಿದೆ.

ಬೆಂಗಳೂರಿನಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವ ಖಲೀಲ್ ಉರ್ ರೆಹಮಾನ್ ಎಂಬುವವರು ಮಾತನಾಡಿ, ಕಳೆದ ಕೆಲವು ದಿನಗಳಿಂದ ನಾನು ನಿದ್ರೆಯನ್ನೇ ಮಾಡಿಲ್ಲ. ಮೃತದೇಹ ಅಂತ್ಯ ಸಂಸ್ಕಾರಕ್ಕೆ ನಾವು ಕನಿಷ್ಟ 6 ಗಂಟೆ ಕಾಯಲೇಬೇಕಾಗಿದೆ.. ಆದರೆ, ಕಳೆದ ಎರಡು ದಿನಗಳಿಂದ ಈ ಸಮಯ 10 ತಾಸುಗಳಿಗೆ ತಲುಪಿದೆ. ತಾವರೆಕೆರೆ, ಹೆಬ್ಬಾಳ, ಕೆಂಗೇರಿಯಲ್ಲಿ ಮೃತದೇಹ ಅಂತ್ಯಸಂಸ್ಕಾರ ಮಾಡಲು 10 ಗಂಟೆಗಳ ಕಾಲ ಕಾಯಬೇಕಾಗಿದೆ. ಒಂದು ಮೃತದೇಹ ಅಂತ್ಯಕ್ರಿಯೆ ನಡೆಸಲು 45-1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಾವು ಕಾಯಲೇಬೇಕಾಗಿದೆ. ಒಂದು ದೇಹದ ಅಂತ್ಯಕ್ರಿಯೆ ಪೂರ್ಣಗೊಳಿಸದ ಹೊರತು ಮತ್ತೊಂದು ಮೃತದೇಹವನ್ನು ಆಸ್ಪತ್ರೆಯಿಂದ ಕರೆತರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚಿತಾಗಾರಗಳಿಗೆ ಬರಲು ಖಾಸಗಿ ಆಸ್ಪತ್ರೆಗಳ ಆ್ಯಂಬುಲೆನ್ಸ್ ಚಾಲಕರು ರೂ.25 ಸಾವಿರದಿಂದ ರೂ.30 ಸಾವಿರ ಕೇಳುತ್ತಿದ್ದಾರೆ. ಬಿಬಿಎಂಪಿ ಆ್ಯಂಬುಲೆನ್ಸ್ ಗಳು ರೂ.250 ಪಡೆಯುತ್ತಿವೆ ಎಂದು ಹೇಳಿದ್ದಾರೆ.

No Comments

Leave A Comment