Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕೊರೋನಾ ಹಬ್ಬಲು ಕಾರಣವಾದ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್

ಚೆನ್ನೈ: ಕೋವಿಡ್-19 ರ ಮಾರಕ ಎರಡನೇ ಅಲೆಯೊಂದಿಗೆ ದೇಶವು ಹೋರಾಡುತ್ತಿರುವಾಗಲೂ ರಾಜಕೀಯ ರ್ಯಾಲಿಗಳಿಗೆ ಅವಕಾಶ ನೀಡಿದ್ದ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ಬಲವಾಗಿ ಖಂಡಿಸಿದೆ.  ಅಲ್ಲದೆ ಜನರ ಸಾವಿಗೆ ಚುನಾವಣಾ ಆಯೋಗವೇ ಕಾರಣ. ಅದರ ವಿರುದ್ಧ ದೂರು ದಾಖಲಾಗಬೇಕು ಎಂದು ಹೇಳಿದೆ.

ರ್ಯಾಲಿಗಳಲ್ಲಿ ಕೊರೋನಾ ನಿಯಮ ಪಾಲನೆಯಾಗುತ್ತಿದೆಯೆ ಎಂದು ಖಚಿತಪಡಿಸಿಕೊಳ್ಲುವಲ್ಲಿ ಆಯೋಗ ವಿಫಲವಾಗಿರುವುದನ್ನು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಖಂಡಿಸಿದ್ದಾರೆ. ಅಲ್ಲದೆ ಕೊರೋನಾ ಎರಡನೇ ಅಲೆಗೆ ಚುನಾವಣಾ ಆಯೋಗವೇ ಕಾರಣ ಎಂದಿದ್ದಾರೆ.

“ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು” ಎಂದು ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ನುಡಿದರು. ಕೋವಿಡ್ 19 ಹರಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ವಕೀಲರು ಹೇಳಿದಾಗ, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು “ರಾಜಕೀಯ ರ್ಯಾಲಿಗಳು ನಡೆಯುತ್ತಿರುವಾಗ ನೀವು ಇನ್ನೊಂದು ಗ್ರಹದಲ್ಲಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.

“ಸಾರ್ವಜನಿಕ ಆರೋಗ್ಯವು ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ವಿಷಯದಲ್ಲಿ ಸಾಂವಿಧಾನಿಕ ಅಧಿಕಾರಿಗಳಿಗೆ ನೆನಪು ಮಾಡಿಕೊಡಬೇಕಾಗಿ ಬಂದಿರುವುದು ವಿಷಾದಕರವಾಗಿದೆ. ನಾಗರಿಕರು ಬದುಕಿದ್ದಾಗ ಮಾತ್ರ ಪ್ರಜಾಪ್ರಭುತ್ವ ಗಣರಾಜ್ಯವು ಖಾತರಿಪಡಿಸುವ ಹಕ್ಕುಗಳನ್ನು ಸಂಭ್ರಮಿಸಲು ಸಾಧ್ಯವಾಗುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಹೇಳಿದರು

ಈ ವರ್ಷ ಏಪ್ರಿಲ್ 6ರಂದು ಚುನಾವಣೆ ನಡೆದ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಕೋವಿಡ್ 19 ಮುನ್ನೆಚ್ಚರಿಕೆ ಖಚಿತಪಡಿಸಿಕೊಳ್ಲಲು ಚುನಾವಣಾ ಆಯೋಗವು ಸರಿಯಾದ ಯೋಜನೆಯನ್ನು ಜಾರಿಗೊಳಿಸದಿದ್ದರೆ, ಮೇ 2 ರದು ಎಣಿಕೆ ಕಾರ್ಯಕ್ರಮಕ್ಕೆ ತಡೆ ನೀಡುವುದಾಗಿ ಹೈಕೋರ್ಟ್ ಎಚ್ಚರಿಸಿದೆ, “ಈಗ ಪರಿಸ್ಥಿತಿ ಉಳಿವು ಮತ್ತು ರಕ್ಷಣೆಯಾಗಿದೆ. ಉಳಿದದ್ದೆಲ್ಲಾ ಮುಂದೆ ಬರುತ್ತದೆ. ರಾಜ್ಯ ಆರೋಗ್ಯ ಕಾರ್ಯದರ್ಶಿಯೊಂದಿಗೆ ಸಮಾಲೋಚನೆ ನಡೆಸಿ ಏಪ್ರಿಲ್ 30ರೊಳಗೆ ಎಣಿಕೆ ದಿನದಂದು ಕೋವಿಡ್ -19 ಪ್ರೋಟೋಕಾಲ್ ಅನ್ನು ಜಾರಿಗೆ ತರುವ ಯೋಜನೆಯನ್ನು ನೀಡುವಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ತಮಿಳುನಾಡಿನಲ್ಲಿ ಒಂದೇ ದಿನ 15,000ಕ್ಕೂ ಎಚ್ಚು ಕೊರೋನಾ ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ ಇಲ್ಲಿಯವರೆಗೆ 10.81 ಲಕ್ಷಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 82 ಸಾವುಗಳು ದಾಖಲಾಗಿದ್ದು, ಇದುವರೆಗೆ 13,557 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

No Comments

Leave A Comment