Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ: ಬೆಳಪುವಿನಲ್ಲಿ ಸ್ಥಾಪನೆಗೊಂಡಿದೆ ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಸ್ಥಾವರ

ಉಡುಪಿ: ದೇಶಾದಾತ್ಯಂತ ಈಗ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಕಾಣಿಸಿಕೊಂಡಿದೆ. ಹಲವಾರು ಕೊರೊನಾ ರೋಗಿಗಳು ಆಕ್ಸಿಜನ್‌ ಲಭಿಸದೆಯೇ ಸಾವನ್ನಪ್ಪಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕ ಕಾಪು ತಾಲೂಕಿನ ಬೆಳಪುವಿನಲ್ಲಿ ಸ್ಥಾಪನೆಗೊಂಡಿದೆ.

ಬೈಕಂಪಾಡಿ ಮತ್ತು ಕಾರ್ನಾಡ್‌ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಮೂರು ಆಕ್ಸಿಜನ್‌ ಘಟಕಗಳಿಂದ ಸದ್ಯ ಉಡುಪಿ ಜಿಲ್ಲೆಯ ಆಸ್ಪತ್ರೆಗಳು ಮತ್ತು ಕೈಗಾರಿಕೆಗಳಿಗೆ ಅಗತ್ಯವಾದ ಆಕ್ಸಿಜನ್‌ ಲಭಿಸುತ್ತಿದೆ. ಆದರೆ ಈಗ ಜಿಲ್ಲೆಯ ಬೆಳಪುವಿನ ಆಕ್ಸಿಜನ್‌ ರಿಫಿಲ್ಲಿಂಗ್‌ ಸ್ಥಾವರ ಸ್ಥಾಪನೆಯಾಗಿರುವ ಹಿನ್ನೆಲೆ ಹೊರ ಜಿಲ್ಲೆಯನ್ನು ಆಕ್ಸಿಜನ್‌ಗಾಗಿ ಇಲ್ಲಿನ ಕೈಗಾರಿಕೆಗಳು ಹಾಗೂ ಆಸ್ಪತ್ರೆಗಳು ಅವಲಂಬಿಸುವುದು ತಪ್ಪುತ್ತದೆ. ಈ ಮೂಲಕ ಜಿಲ್ಲೆಯು ಸ್ವಾವಲಂಬಿಯಾಗಲಿದೆ.

ಇನ್ನು ಬೆಳಪುವಿನಲ್ಲಿ ಆಕ್ಸಿಜನ್‌ ರಿಫಿಲ್ಲಿಂಗ್‌ ಸ್ಥಾವರವನ್ನು ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಎಸ್‌.ಎನ್‌. ಕ್ರೈಯೋಜನಿಕ್ಸ್‌ ಪ್ರೈ. ಲಿ. ಸಂಸ್ಥೆಯು ಕೈಗಾರಿಕೆಗೆ ಮತ್ತು ಮೆಡಿಕಲ್‌ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ಸ್ಥಾಪಿಸಿದೆ. ಇಲ್ಲಿಗೆ ಬೇಕಾಗುವ ಲಿಕ್ವಿಡ್‌ ಆಕ್ಸಿಜನ್‌ ಅನ್ನು ಬೆಂಗಳೂರು ಮತ್ತು ಬಳ್ಳಾರಿ ಸಮೀಪದ ತೋರಂಗಲ್‌ನಿಂದ ತರಿಸಿಕೊಳ್ಳಲಾಗುತ್ತದೆ. ಒಮ್ಮೆಗೆ 20 ಸಾವಿರ ಕ್ಯೂಬಿಕ್‌ ಮೀ. ಲಿಕ್ವಿಡ್‌ ಆಕ್ಸಿಜನ್‌ ತರಿಸಿ ದಾಸ್ತಾನು ಮಾಡಿ ಆ ನಂತರ ಗ್ಯಾಸ್‌ ಆಗಿ ಸಂಸ್ಕರಿಸಿ ಸಿಲಿಂಡರ್‌ಗಳಿಗೆ ತುಂಬಲಾಗುತ್ತದೆ. ಲಿಕ್ವಿಡ್‌ ಆಕ್ಸಿಜನ್‌ ಪೂರೈಕೆ ಯೋಜನೆಯಂತೆ ಆದರೆ ಒಂದೆರಡು ದಿನದಲ್ಲೇ ಜಿಲ್ಲೆಯ ಆಸ್ಪತ್ರೆ ಹಾಗೂ ಕೈಗಾರಿಕೆಗಳಿಗೆ ಆಕ್ಸಿಜನ್‌ ಸಿಲಿಂಡರ್‌ಗಳು ದೊರೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸ್ಥ ನಟರಾಜ್‌, ಈ ಸ್ಥಾವರ ಸ್ಥಾಪನೆಯಿಂದಾಗಿ ಜಿಲ್ಲೆಯ ಆಸ್ಪತ್ರೆಗಳಿಗೆ ಕಡಿಮೆ ಸಾಗಾಟ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ಆಕ್ಸಿಜನ್‌ ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಜಿಲ್ಲೆಯ ಉಡುಪಿ, ಮಣಿಪಾಲ, ಕುಂದಾಪುರ, ಬ್ರಹ್ಮಾವರ, ಕಾರ್ಕಳ ಸೇರಿದಂತೆ ಸರಕಾರಿ ಮತ್ತು ಖಾಸಗಿ ವಲಯದ 40ಕ್ಕೂ ಅಧಿಕ ಆಸ್ಪತ್ರೆಗಳಿಗೆ ಆಕ್ಸಿಜನ್‌ ಸರಬರಾಜು ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಬೆಳಪುವಿನ ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕಕ್ಕೆ ಪರವಾನಿಗೆ ನೀಡಲಾಗಿದೆ. ಈ ಘಟಕದಿಂದಾಗಿ ಜಿಲ್ಲೆಯ ಮೆಡಿಕಲ್‌ ಎಮರ್ಜೆನ್ಸಿಗೆ ಸಹಾಯವಾಗಲಿದೆ. ಈ ಘಟಕ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

No Comments

Leave A Comment