Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ; ಬೆಡ್ ಗಳ ಕೊರತೆ; ಒಂದೇ ಬೆಡ್ ನಲ್ಲಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ಸಾಂಕ್ರಾಮಿಕ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ ಒಂದೇ ಬೆಡ್ ನಲ್ಲಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಧಾರುಣ ಫೋಟೋ ವ್ಯಾಪಕ ವೈರಲ್ ಆಗುತ್ತಿದೆ.

ದೆಹಲಿಯ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕ ತೀವ್ರ ಕೊರತೆ ಎದುರಾಗಿದ್ದು, ಪರಿಣಾಮ ಒಂದೇ ಹಾಸಿಗೆಯಲ್ಲಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಇಬ್ಬರು ಕೊರೊನಾ ಸೋಂಕಿತರು ಮಲಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 1500 ಹಾಸಿಗೆ ವ್ಯವಸ್ಥೆಯಿರುವ  ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲೇ ಇಂತಹ ಕರುಣಾಜನಕ ಕಥೆಯಾದರೆ ಇತರೆ ಆಸ್ಪತ್ರೆಗಳ ಕಥೆ ಇನ್ನೂ ಧಾರುಣವಾಗಿದೆ.

ಈ ವೈರಲ್ ಫೋಟೋ ಕುರಿತು ಮಾತನಾಡಿರುವ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ಅವರು, ‘ನನಗೆ ಗೊತ್ತು, ನಮ್ಮ ಆಸ್ಪತ್ರೆಯಲ್ಲಿ ಮಿತಿಮೀರಿದ, ಹಿಡಿಯಲಾರದಷ್ಟು ಕೊರೊನಾ ಸೋಂಕಿತರು ತುಂಬಲಿದ್ದಾರೆ. ಈಗಲೇ ಹಾಸಿಗೆಯೂ ಸೇರಿ  ನಮ್ಮಲ್ಲಿರುವ ಎಲ್ಲಾ ವ್ಯವಸ್ಥೆಗಳ ಸಾಮರ್ಥ್ಯ ಭರ್ತಿಯಾಗಿದೆ. ಮೊದಲು ನಮ್ಮಲ್ಲಿ 54 ಹಾಸಿಗೆಗಳಿದ್ದವು. ಸದ್ಯ ದಾಖಲಾಗಿರುವ ಕೊವಿಡ್ ಸೋಂಕಿತರ ಪೈಕಿ 300 ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಬೆಡ್​ಗಳ ಕೊರತೆಯಿಂದ ಕೊವಿಡ್ ಇಲ್ಲದ ರೋಗಿಗಳೂ ಕೊವಿಡ್ ಸೋಂಕಿತರ ಜತೆ ಬೆಡ್ ಹಂಚಿಕೊಳ್ಳಬೇಕಾದ  ಸ್ಥಿತಿ ಎದುರಾಗಿದೆ. ಇಂದು ಒಂದೇ ದಿನ ಗಂಭೀರ ಆರೋಗ್ಯ ಸಮಸ್ಯೆಗಳಿರುವ 158 ರೋಗಿಗಳು ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ.

2021ರ ಮೊದಲ ಮೂರು ತಿಂಗಳಲ್ಲಿ ಕೊರೊನಾ ತಡೆ ಮಾರ್ಗದರ್ಶಿ ಸೂತ್ರಗಳನ್ನು ನಿಧಾನವಾಗಿ ಸಡಿಲಿಸಲಾಯಿತು. ಈ ಸಡಿಲಿಸುವಿಕೆಯೇ ಇಂದಿನ ಗಂಭೀರ ಸ್ಥಿತಿಗೆ ಕಾರಣ. ಜನರು ಮೊದಲಿನಂತೆಯೇ ಎಗ್ಗಿಲ್ಲದೇ ತಿರುಗಾಟ ಆರಂಭಿಸಿದರು. ಕೊರೊನಾ ತಡೆ ನಿಯಮಗಳನ್ನು ಮರೆತುಬಿಟ್ಟರು. ಸಾರ್ವಜನಿಕರ ಈ  ವರ್ತನೆಯೇ ಕೊರೊನಾ ಹೆಚ್ಚಲು ಕಾರಣವಾಯಿತು ಎಂದು ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ದೆಹಲಿಯಲ್ಲಿ ನಿನ್ನೆ 16,699 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ ಒಂದೇ ದಿನ ಕೊರೊನಾದಿಂದ 112 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಪರೀಕ್ಷೆಯ ಪಾಸಿಟಿವ್ ರೇಟ್ ಶೇ 20.22ರಷ್ಟಿದ್ದು ದೇಶದ ರಾಜಧಾನಿ ಒಂದರಲ್ಲೇ  54,309 ಸಕ್ರಿಯ ಪ್ರಕರಣಗಳಿವೆ.

No Comments

Leave A Comment