6ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವೇ ಇಲ್ಲ, ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಸಾರಿಗೆ ನೌಕರರಿಗೆ ಸಿಎಂ ಯಡಿಯೂರಪ್ಪ
ಬೆಂಗಳೂರು: ಪ್ರಸ್ತುತದ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವೇ ಇಲ್ಲ. ಈಗಾಗಲೇ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದ್ದು, ಈಗಲೂ ಹಠ ಮಾಡುವುದು ಸರಿಯಲ್ಲ. ಈಗಾಗಲಾದರೂ ಅರ್ಥಮಾಡಿಕೊಂಡು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಸಾರಿಗೆ ನೌಕರರು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನಡೆದುಕೊಳ್ಳಬೇಕು. ಇವತ್ತಿನಿಂದ ನಿಮ್ಮ ಬಸ್ಗಳನ್ನು ಓಡಾಡಿಸೋಕೆ ಶುರು ಮಾಡಿ. ಕೋವಿಡ್ ಕಾರಣದಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿರುವಾಗ ಈ ರೀತಿ ಹಠ ಮಾಡುವುದು ಎಷ್ಟರ ಮಟ್ಟಿಗೆ ಸರಿ. ನೀವೇ ಯೋಚನೆ ಮಾಡಿ. ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ. ಹಠ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳಿದ್ದಾರೆ.
ಆದಾಯದಲ್ಲಿ ಶೇ 85ರಷ್ಟು ಭಾಗ ಸರ್ಕಾರಿ ನೌಕರಿಗೆ ವೇತನ, ಪಿಂಚಣಿ ಸೇರಿದಂತೆ ಇತರ ಯೋಜನೇತರ ವೆಚ್ಚಗಳಿಗೆ ಖರ್ಚಾಗುತ್ತಿದೆ. ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಹಠಕ್ಕೆ ಬೀಳಬಾರದು. ಈಗಾಗಲೇ 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಅದರಲ್ಲಿ ಲೋಪದೋಷ ಇದ್ದರೆ ಹೇಳಿ, ಸರಿಪಡಿಸೋಣ. ಅದನ್ನು ಬಿಟ್ಟು ಯಾರದ್ದೋ ಮಾತಿಗೆ ಬಲಿಯಾಗಿ ಈ ರೀತಿ ಹಠ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸರ್ಕಾರ ಸಾರಿಗೆ ನೌಕರರ ಪಟ್ಟು ಬಿಡದ ಹಠದಿಂದ ಪ್ರಯಾಣಿಕರು ಮಾತ್ರ ನಿತ್ಯವೂ ಹೈರಾಣರಾಗುತ್ತಿದ್ದಾರೆ.
ತಮ್ಮ ಬೇಡಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಸತತ ಮೂರನೇ ದಿನವೂ ಮುಂದುವರೆದಿದೆ. ಸಾರಿಗೆ ನೌಕರರ ಪ್ರತಿಭಟನೆಯಿಂದಾಗಿ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಸಾರಿಗೆ ಬಸ್ ಗಳಿಲ್ಲದೇ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.
ಇನ್ನೂ ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆದಿರುವಂತ ರಾಜ್ಯ ಸರ್ಕಾರ, ಬೇಡಿಕೆ ಈಡೇರಿಸುವಂತ ಕ್ರಮ ವಹಿಸುವ ಬದಲು, ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಎರಡು ವರ್ಷಗಳ ಹಿಂದೆ ನಿವೃತ್ತರಾದ ಸಾರಿಗೆ ನೌಕರರನ್ನು ಮತ್ತೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಹೊರಟಿದೆ. ಈ ಸಾರಿಗೆ ನೌಕರರ ಮುಷ್ಕರ ಯಾವಾಗ ಮುಗಿಯುತ್ತದೋ, ಯುಗಾದಿಯ ವೇಳೆಗೆ ಊರಿಗೆ ಹೋಗಲು ಏನು ಮಾಡಬೇಕು ಎಂಬ ಆತಂಕ ಪ್ರಯಾಣಿಕರನ್ನು ಕಾಡುತ್ತಿದೆ