ಸಿಡಿ ಪ್ರಕರಣ: ಕಮಲ್ ಪಂತ್ ಸೇರಿ 3 ಪೊಲೀಸ್ ಅಧಿಕಾರಿಗಳ ವಿರುದ್ಧ ಖಾಸಗಿ ಮೊಕದ್ದಮೆ
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಖಾಸಗಿ ಮೊಕದ್ದಮೆಯೊಂದು ದಾಖಲಾಗಿದೆ.
ಸಿ.ಡಿ. ಪ್ರಕರಣ ಸಂಬಂಧ ರಮೇಶ ಜಾರಕಿಹೊಳಿ ವಿರುದ್ಧ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಿಸದ ಆರೋಪದಡಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿ ಮೂವರು ಅಧಿಕಾರಿಗಳ ವಿರುದ್ಧ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ನ್ಯಾಯಾಲಯಕ್ಕೆ ಜನಾಧಿಕಾರ ಸಂಘರ್ಷ ಪರಿಷತ್ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ‘ಯುವತಿ ಮೇಲಾದ ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ಬಗ್ಗೆ ದಿನೇಶ್ ಕಲ್ಲಹಳ್ಳಿ ಮಾರ್ಚ್ 16 ರಂದು ದೂರು ನೀಡಿದ್ದರು. ಆದರೆ, ಪೊಲೀಸ್ ಆಯುಕ್ತ ಕಮಲ್ ಪಂತ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಬಿ. ಮಾರುತಿ ಎಫ್ಐಆರ್ ದಾಖಲಿಸಿಕೊಂಡಿರಲಿಲ್ಲ. ಬದಲಿಗೆ ದೂರುದಾರರನ್ನೇ ವಿಚಾರಣೆಗೆ ಒಳಪಡಿಸಿದ್ದರು’ ಎಂದು ದೂರಿದ್ದಾರೆ.
ಇದೀಗ ಈ ಮೊಕದ್ದಮೆ ಅಂಗೀಕರಿಸಿರುವ ನ್ಯಾಯಾಲಯ, ಅದರ ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿದೆ.