Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ನಂಜನಗೂಡು: ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ ಕಿಡಿಗೇಡಿಗಳಿಂದ ಬೆಂಕಿ, 16 ಎಕರೆ ಅರಣ್ಯ ನಾಶ

ಮೈಸೂರು: ನಂಜನಗೂಡಿನ ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಪರಿಣಾಮ ಸುಮಾರು 16 ಎಕರೆ ಅರಣ್ಯ ನಾಶವಾಗಿದೆ ಎಂದು ತಿಳಿದುಬಂದಿದೆ.

ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿ ವ್ಯಾಪ್ತಿಯ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಬೆಟ್ಟದಲ್ಲಿ  ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸುಳಿಗಾಳಿಗೆ ಬೆಂಕಿ ಇಡೀ ಅರಣ್ಯಪ್ರದೇಶವನ್ನು ವ್ಯಾಪಿಸಿದೆ. ಅರಣ್ಯ ಪ್ರದೇಶದಲ್ಲಿದ್ದ ಗಂಧದ ಮರ, ನೀಲಗಿರಿ ಮರಗಳು ಸೇರಿದಂತೆ ಹಲವು ಬಗೆಯ ಔಷಧೀಯ ಗಿಡ ಮರಗಳು ಸುಟ್ಟು ಭಸ್ಮವಾಗಿದೆ.

ಮಾಹಿತಿ ನೀಡಿದ ಗ್ರಾಮಸ್ಥರು
ಸಮೀಪದ ಗ್ರಾಮಸ್ಥರು ಅರಣ್ಯಕ್ಕೆ ಬೆಂಕಿ ತಗುಲಿರುವುದನ್ನು ಗಮನಿಸಿದ್ದು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಹರಸಾಹಸ ಪಡುವಂತ್ತಾಗಿದೆ.

ವಿವಿಧ ತಳಿಯ ಜಿಂಕೆಗಳ ಪ್ರಮುಖ ಆವಾಸ ಸ್ಥಾನ
ಕಾರ್ಯ ಸಿದ್ದೇಶ್ವರ ಬೆಟ್ಟ ವಿವಿಧ ಜಿಂಕೆ ತಳಿಗಳಿಗೆ ಆವಾಸ ಸ್ಥಾನವಾಗಿದ್ದು, ಸಾಕಷ್ಟು ಸಂಖ್ಯೆಯ ಜಿಂಕೆಗಳು ಇಲ್ಲಿ ಜೀವಿಸುತ್ತಿದ್ದವು. ಆದರೆ ಬೆಂಕಿಯಿಂದಾಗಿ ಪ್ರಾಣಿಗಳು ಬೇರೆ ಕಡೆ ವಲಸೆ ಹೋಗಿರುವ ಆತಂಕ ಕೂಡ ಅಧಿಕಾರಿಗಳಿಗೆ ವ್ಯಕ್ತವಾಗುತ್ತಿದೆ.

ತುರ್ತು ಕಾರ್ಯಾಚರಣೆಯಿಂದ ಮತ್ತಷ್ಟು ನಷ್ಟ ತಪ್ಪಿದೆ
ಈ ಬಗ್ಗೆ ಮಾತನಾಡಿರುವ ಪ್ರಾಂತೀಯ ಅರಣ್ಯಾಧಿಕಾರಿ ರಕ್ಷಿತ್ ಅವರು, ಸ್ಥಳೀಯರು ಬೆಂಕಿ ಕುರಿತು ಸೂಕ್ತ ಸಮಯದಲ್ಲಿ ಮಾಹಿತಿ ನೀಡಿದ್ದು, ತುರ್ತಾಗಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅರಣ್ಯದಲ್ಲಿ ಗಾಳಿ ತುಂಬಾ ಕಡಿಮೆ ಇದ್ದಿದ್ದರಿಂದ ಬೆಂಕಿ ವೇಗವಾಗಿ ವ್ಯಾಪಿಸಿಲ್ಲ. ಸೂಕ್ತ ಸಮಯದಲ್ಲಿ ಬೆಂಕಿ ನಂದಿಸಿದ್ದರಿಂದ ಆಗ ಬಹುದಾಗಿದ್ದ ಮತ್ತಷ್ಟು ನಷ್ಟ ತಪ್ಪಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಸಿಬ್ಬಂದಿ ನೇಮಕ-ಗ್ರಾಮಸ್ಥರಲ್ಲಿ ಅರಿವು
ಅಂತೆಯೇ ಅರಣ್ಯ ಕಣ್ಗಾವಲಿಗೆ ಮತ್ತಷ್ಟು ಸಿಬ್ಬಂದಿಗಳನ್ನು ನೇಮಿಸುವುದಾಗಿ ಹೇಳಿದ ಅವರು, ಅಂತೆಯೇ ಸ್ಥಳೀಯ ಗ್ರಾಮಸ್ಥರಿಗೂ ಈ ಬಗ್ಗೆ ಅರಿವು ಮೂಡಿಸಿ ಕಿಡಿಗೇಡಿಗಳು ಅರಣ್ಯ ಪ್ರವೇಶಿಸದಂತೆ ತಡೆಯಬೇಕು. ಒಂದು ವೇಳೆ ಯಾರಾದರೂ ಅಕ್ರಮವಾಗಿ ಅರಣ್ಯ ಪ್ರವೇಶಿಸಿದರೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಒಂದೇ ವಾರದ ಅವಧಿಯಲ್ಲಿ 2 ಘಟನೆ
ಕಳೆದ ವಾರ ಕೂಡ ಉಮ್ಮತ್ತೂರು ಬೆಟ್ಟದ ಬಳಿ ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಇದರಲ್ಲೂ ದುಷ್ಕರ್ಮಿಗಳ ಕೈವಾಡದ ಕುರಿತು ಶಂಕಿಸಲಾಗಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ರಕ್ಷಿತ್ ಹೇಳಿದ್ದಾರೆ.

No Comments

Leave A Comment