ಕಾಶ್ಮೀರದಲ್ಲಿ ಎನ್ ಕೌಂಟರ್: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಹತ
ಶ್ರೀನಗರ: ಕಳೆದ ವಾರ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.
ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ.
ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಈ ಎನ್ ಕೌಂಟರ್ ಬಗ್ಗೆ ಮಾಹಿತಿ ನೀಡಿದ್ದು, “ಶನಿವಾರ ಸಂಜೆ ಪ್ರಾರಂಭವಾದ ಎನ್ ಕೌಂಟರ್ ಕಾರ್ಯಾಚರಣೆ ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಲಷ್ಕರ್ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಪೈಕಿ ಇನಾತ್-ಉಲ್ಲಾ-ಶೇಖ್ ಶೋಪಿಯಾನ್ ನ ನಿವಾಸಿಯಾಗಿದ್ದು 2018 ರಿಂದಲೂ ಸಕ್ರಿಯನಾಗಿದ್ದುಕೊಂಡು ಕಳೆದ ವರ್ಷ ಶಸ್ತ್ರಾಸ್ತ್ರ ತರಬೇತಿಗೆ ಪಾಕಿಸ್ತಾನಕ್ಕೆ ತೆರಳಿದ್ದ, ಕಳೆದ ವಾರವಷ್ಟೇ ವಾಪಸ್ಸಾಗಿದ್ದ ಆತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿ ಎಂದು ತಿಳಿದುಬಂದಿದೆ.
ಮತ್ತೋರ್ವ ಭಯೋತ್ಪಾದಕ ಆದಿಲ್ ಮಲೀಕ್, ಅನಂತ್ ನಾಗ್ ನ ನಿವಾಸಿಯಾಗಿದ್ದು, ಎಲ್ಇಟಿಗೆ ಸೇರಿದ ಉಗ್ರ ಎಂದು ತಿಳಿದುಬಂದಿದೆ. ಎನ್ ಕೌಂಟರ್ ನಡೆದ ಸ್ಥಳದಲ್ಲಿ ಒಂದು ಎಕೆ-47 ರೈಫಲ್, ಒಂದು ಎಂ-4 ರೈಫಲ್ ಹಾಗೂ ಪಿಸ್ತೋಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.