Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಕೊನೆಗೂ ದಾರಿ ಕೊಟ್ಟ ಎವರ್ ಗಿವೆನ್; ಸತತ 6 ದಿನಗಳ ಬಳಿಕ ಸುಯೆಜ್ ಕಾಲುವೆ ಮಾರ್ಗ ಬಂದ್ ಮಾಡಿದ್ದ ಬೃಹತ್ ಹಡಗು ತೆರವು

ಸುಯೆಜ್: ಸತತ ಆರು ದಿನಗಳ ಸುಯೆಜ್ ಕಾಲುವೆ ಮಾರ್ಗ ಬಂದ್ ಮಾಡಿದ್ದ ಬೃಹತ್ ಸರಕು ಸಾಗಾಣಿಕಾ ಹಡಗು ಎವರ್ ಗಿವೆನ್ ಕೊನೆಗೂ ದಾರಿ ಮಾಡಿಕೊಟ್ಟಿದ್ದು, ಟಗ್ ಬೋಟ್ ಗಳ ನೆರನಿಂದ ಎವರ್ ಗಿವೆನ್ ಕಾಲುವೆಯ ಮತ್ತೊಂದು ಬದಿಗೆ ಸರಿದಿದೆ.

ನಾಲ್ಕು ಫುಟ್‌ಬಾಲ್‌ ಮೈದಾನಗಳಿಗಿಂತ ಉದ್ದದ ‘ಎಂವಿ ಎವರ್‌ ಗಿವೆನ್‌’ ಬೃಹತ್‌ ಹಡಗು ಕಳೆದ ಮಂಗಳವಾರದಿಂದ ಸುಯೆಜ್‌ ಕಾಲುವೆಗೆ ಅಡ್ಡಲಾಗಿ ಸಿಲುಕಿಕೊಂಡಿತ್ತು. ಇದರಿಂದಾಗಿ ಜಗತ್ತಿನಾದ್ಯಂತ ಕಚ್ಚಾ ತೈಲ ಪೂರೈಕೆ ಸೇರಿದಂತೆ ಹಲವು ವಸ್ತುಗಳ ಸಾಗಣೆಯಲ್ಲಿ ವ್ಯತ್ಯವಾಗಿತ್ತು. ಕಾಲುವೆ ಸಂಚಾರ ಅಡಚಣೆಯಿಂದಾಗಿ ಜಾಗತಿಕ ವಹಿವಾಟಿನ ಮೇಲೆ ಸುಮಾರು 6ರಿಂದ 10 ಬಿಲಿಯನ್‌ ಡಾಲರ್‌ಗಳಷ್ಟು ಹೊರೆಯಾಗಿತ್ತು. ಇದೀಗ ಸತತ ಕಾರ್ಯಾಚರಣೆಗಳ ಫಲವಾಗಿ ಎವರ್ ಗಿವೆನ್ ಹಡಗು ಮುಂದಕ್ಕೆ ಸಾಗಿದ್ದು, ಹಡಗನ್ನು ಸತತ ಕಾರ್ಯಾಚರಣೆಗಳ ಬಳಿಕ ಚಲಿಸುವಂತೆ ಮಾಡಲಾಗಿದೆ.

ಈ ಬಗ್ಗೆ ಸುಯೆಜ್ ಕಾಲುವೆ ಪ್ರಾಧಿಕಾರ ಮಾಹಿತಿ ನೀಡಿದ್ದು, ನಿನ್ನೆ ಕಾಲುವೆಯಲ್ಲಿ ತುಂಬಿದ್ದ ಹೂಳು ತೆಗೆದ ಪರಿಣಾಮ ಬೋಟ್ 2 ಇಂಚು ಪಕ್ಕಕ್ಕೆ ಕದಲಿತ್ತು. ಇದೀಗ ಟಗ್ ಬೋಟ್ ಗಳು ಮತ್ತು ಡ್ರೆಡ್ಜರ್ ಗಳ ನಿರಂತರ ಕಾರ್ಯಾಚರಣೆಯ ಫಲವಾಗಿ ಬೋಟ್ ಅನ್ನು ಮಾರ್ಗದಿಂದ ತೆರವುಗೊಳಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ. ಕಾರ್ಯಾಚರಣೆ  ವೇಳೆ ಹಡಗಿನ ಸುತ್ತಲೂ 59 ಅಡಿಗಳಷ್ಟು ಆಳದವರೆಗೂ 27,000 ಘನ ಮೀಟರ್ ಮರಳನ್ನು ಅಗೆದು ತೆಗೆದು ಹಾಕಲಾಗಿದೆ. ಪರಿಣಾಮ ಬೋಟ್ ಅನ್ನು 30 ಡಿಗ್ರಿ ಪಕ್ಕಕ್ಕೆ ತಿರುಗಿಸಲು ನೆರವಾಯಿತು ಎಂದು ವರದಿಗಳು ತಿಳಿಸಿವೆ.

ಇದೀಗ ಎವರ್ ಗಿವೆನ್ ಹಡಗು ಮುಂದಕ್ಕೆ ಸಾಗಿದ್ದು, ಸುಯೆಜ್‌ ಕಾಲುವೆಯಲ್ಲಿ ಅಡ್ಡಲಾಗಿ ಆರು ದಿನಗಳಿಂದ ಸಿಲುಕಿಕೊಂಡಿದ್ದ ಬೃಹತ್‌ ಕಂಟೇನರ್ ಹಡಗು ಸೋಮವಾರ ಮತ್ತೆ ಸಂಚಾರ ಆರಂಭಿಸಿದೆ. ಇದರಿಂದ ಜಾಗತಿಕ ವಾಣಿಜ್ಯ ವಹಿವಾಟುಗಳ ಪ್ರಮುಖ ಹಾದಿ ತಿಳಿಯಾಗುವ ಭರವಸೆ ಮೂಡಿದೆ. ಅಂತೆಯೇ ಸುಯೆಜ್ ಕಾಲುವೆಯ ಎರಡು ಬದಿಗಳಲ್ಲಿ ಲಂಗರು ಹಾಕಿ ನಿಂತಿದ್ದ ಸುಮಾರು 450ಕ್ಕೂ ಅಧಿಕ ಸರಕು ಸಾಗಾಣಿಕಾ ಬೋಟ್ ಗಳ ಮಾರ್ಗ ಸುಗುಮವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವೆಸೆಲ್‌ಫೈಂಡರ್‌ ಮತ್ತು ಮೈಶಿಪ್‌ ಟ್ರ್ಯಾಕಿಂಗ್‌ ಸೈಟ್‌ಗಳ ಪ್ರಕಾರ, ಈಗ ಹಡಗು ಕಾಲುವೆಯ ಪಶ್ಚಿಮ ತೀರದಿಂದ ಮುಂದಕ್ಕೆ ಸಂಚರಿಸಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಈ ಕಾಲುವೆ ಮುಖಾಂತರವೇ ಜಗತ್ತಿನ ಒಟ್ಟಾರೆ ವಾಣಿಜ್ಯ ವಹಿವಾಟಿನ ಬರೊಬ್ಬರಿ ಶೇ.12ರಷ್ಚು ಮೊತ್ತದ ವಹಿವಾಟಿನ ಸರಕು ಸಾಗಾಣಿಕಾ ಬೋಟ್ ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.

ಏನಿದು ಘಟನೆ?
ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್‌ ಗಿವೆನ್ ಹಡಗು, ಸುಯೆಜ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಕೆಟ್ಟು ನಿಂತಿತ್ತು. ಈ ಹಡಗು ಸುಮಾರು 400 ಮೀಟರ್‌ ಉದ್ಧವಿದ್ದು,  2 ಲಕ್ಷ ಟನ್ ತೂಕವನ್ನು ಹೊಂದಿದೆ. ಈ ಹಡಗಿನಲ್ಲಿ ಸುಮಾರು 22,000 ಕಂಟೈನರ್ ಗಳನ್ನು ಸಾಗಿಸಲಾಗುತ್ತಿತ್ತು. ಹಡಗು ಸುಯೆಜ್ ಕಾಲುವೆಯಲ್ಲಿ ಕೆಟ್ಟು ನಿಂತಾಗ ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ, ಹಡಗಿನ ಮುಂಭಾಗ ದಕ್ಷಿಣದ ಕಡೆಗೆ, ಹಿಂಭಾಗ ಉತ್ತರದ ಕಡೆಗೆ ತೇಲಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಡಗು ಕಾಲುವೆಗೆ ಅಡ್ಡಲಾಗಿ ನಿಂತಿದೆ.  ಆದರೆ, ಹಡಗಿನ ಮುಂಭಾಗ ಮತ್ತು ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿತ್ತು. ಮರಳಿನಿಂದ ಅದನ್ನು ಬಿಡಿಸಲು ಸಾಧ್ಯವಾಗದೆ ಕಾಲುವೆ ಸಂಪೂರ್ಣವಾಗಿ ಬಂದ್ ಆಗಿತ್ತು.

No Comments

Leave A Comment