Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಯತ್ನಾಳ್ ಹೇಳಿಕೆ ಅಸಹನೀಯವಾದದ್ದು: ಕ್ರಮಕ್ಕೆ ಆಗ್ರಹಿಸಿ ಸಿಎಂ ಭೇಟಿಯಾದ ಬಿಜೆಪಿ ಶಾಸಕರು

ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಕ್ರಮ ಕೈಗೊಳ್ಳಬೇಕೆಂದು 60ಕ್ಕೂ ಬಿಜೆಪಿ ಶಾಸಕರು ಆಗ್ರಹಿಸಿದ್ದು, ಗುರುವಾರ ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ಹೊರಹಾಕಿದರು.

ಮುಖ್ಯಮಂತ್ರಿಗಳೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಯತ್ನಾಳ್ ವಿರುದ್ಧ ಬಿಜೆಪಿ ಶಾಸಕರು ತೀವ್ರವಾಗಿ ಕಿಡಿಕಾರಿದರು.

ಯತ್ನಾಳ್ ರಂತಹ ದೊಡ್ಡ ನಾಯಕರೇ ಯಡಿಯೂರಪ್ಪ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದು, ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಕುರಿತು ಟೀಕೆ ಮಾಡುತ್ತಿದ್ದಾರೆ. ಪಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ನಾಯಕರೇ ವಾಗ್ದಾಳಿ ನಡೆಸಿದರೆ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಜನರು ಪಕ್ಷಕ್ಕೆ ಮತ ಹಾಕುವರೇ? ಎಂದು ಪ್ರಶ್ನಿಸಿದ್ದಾರೆ.

ಯತ್ನಾಳ್ ವಿರುದ್ಧ ಬಿಜೆಪಿ ಶಾಸಕರು ದೂರು ನೀಡಿದರು, ಯಡಿಯೂರಪ್ಪ ಮಾತ್ರ ಯಾವುದೇ ಹೇಳಿಕೆಗಳನ್ನೂ ನೀಡದೆ, ಮುಂಬರುವ ಚುನಾವಣೆಗಳಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ.

ಸಭೆ ವೇಳೆ ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಡ ಹೇರಿದ ಶಾಸಕರು ಇದೇ ವೇಳೆ ದೂರುಗಳ ಸುರಿಮಳೆಯನ್ನೂ ಸುರಿಸಿದರು. ಆದರೆ, ಅಂತಿಮವಾಗಿ ಬಿಎಸ್’ವೈ ಅವರೇ ನಮ್ಮ ನಾಯಕ, ಯಾವುದೇ ಪರಿಸ್ಥಿತಿಯಲ್ಲಿ ಅವರೊಂದಿಗೆ ನಿಲ್ಲುವುದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.

ವಿಧಾನಮಂಡಲ ಅಧಿವೇಶನದ ನೇಪಥ್ಯದಲ್ಲೇ ಸಿಎಂ ಅವರನ್ನು ಭೇಟಿಯಾಗಿದ್ದ ಶಾಸಕರು, ದೂರು ದುಮ್ಮಾನ ತೋಡಿಕೊಂಡಿದ್ದರು. ಮಾರ್ಚ್ 25ರಂದು ಸಭೆ ನಡೆಸುವುದಾಗಿ ಸಿಎಂ ಈ ಶಾಸಕರ ನಿಯೋಗಕ್ಕೆ ಭರವಸೆ ನೀಡಿದ್ದರು. ಅದರಂತೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆಯೂ ಶಾಸಕರು ಆಗ್ರಹಿಸಿದರು.

ಸಚಿವ ಸಂಪುಟದ ಬಹುತೇಕ ಸದಸ್ಯರು ತಮ್ಮ ಕೆಲಸ ಮಾಡಿಕೊಡುತ್ತಿಲ್ಲವೆಂದು ತಕರಾರು ತೆಗೆದರು. ಈ ಶಾಸಕರ ಎಲ್ಲ ಅಹವಾಲನ್ನು ಸಿಎಂ ಬಿಎಸ್‌ವೈ ಕೇಳಿಸಿಕೊಂಡರು. ಸುಮಾರು ಎರಡೂವರೆ ತಾಸಿಗೂ ಹೆಚ್ಚು ಹೊತ್ತು ಈ ಸಭೆ ನಡೆಯಿತು.

ಕ್ಷೇತ್ರಾಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೂ ಮಾಡಿ ಕೊಡಲಾಗುವುದು. ಈ ಸಂಬಂಧ ನೇರವಾಗಿ ಬಂದು ಭೇಟಿ ಮಾಡಬಹುದು ಎಂದು ಶಾಸಕರಿಗೆ ಸಿಎಂ ಅಭಯ ಕೊಟ್ಟರು.

ಇದೇ ವೇಳೆ ಯಡಿಯೂರಪ್ಪ ಅವರು ಕೆಲ ಸಚಿವರನ್ನೂ ಸಭೆಗೆ ಕರೆಸಿ ಮುಖಾಮುಖಿ ಮಾಡಿಸಿದರು. ಮುಖ್ಯ ಕಾರ್ಯದರ್ಶಿ ಸಹಿತ ಹಿರಿಯ ಅಧಿಕಾರಿಗಳನ್ನೂ ಕರೆಸಿ ನಿರ್ದಿಷ್ಟ ಸೂಚನೆ ಕೊಟ್ಟರು. ಈ ಮೂಲಕ ದೂರು ಹೇಳಲು ಬಂದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸಿಎಂ ಮಾಡಿದರು.

ಇದರಿಂದ ಸಮಾಧಾನಗೊಂಡ ಶಾಸಕರು ಬಿಎಸ್‌ವೈ ಜತೆಗೆ ನಿಲ್ಲುವುದಾಗಿ ಹೇಳಿದರು. ಯತ್ನಾಳ್‌ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಬೇಕು. ತಾವೇ ಖುದ್ದಾಗಿ ಈ ಸಂಬಂಧ ಹೈಕಮಾಂಡ್‌ನೊಂದಿಗೆ ಮಾತುಕತೆ ನಡೆಸಬೇಕೆಂದು ಶಾಸಕರು ಒತ್ತಾಯಿಸಿದರು. ಈ ಸಂಬಂಧ ಹಕ್ಕೊತ್ತಾಯದ ಪತ್ರ ಬರೆದು ಸಹಿ ಹಾಕಿ ಕೊಟ್ಟರು ಎಂದು ಮೂಲಗಳು ತಿಳಿಸಿವೆ.

No Comments

Leave A Comment