ಮುಂಬೈ ಮಾಲ್ ವೊಂದರ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ದುರಂತ: ಮೃತ ರೋಗಿಗಳ ಸಂಖ್ಯೆ 10ಕ್ಕೆ ಏರಿಕೆ!
ಬಂಡುಪ್(ಮುಂಬೈ): ಆಸ್ಪತ್ರೆಯಲ್ಲಿ ಬೆಂಕಿ ದುರಂತದ ಪ್ರಕರಣ ಮುಂದುವರಿದಿದೆ. ಮುಂಬೈಯ ಬಂಡುಪ್ ಪ್ರದೇಶದಲ್ಲಿರುವ ಡ್ರೀಮ್ಸ್ ಮಾಲ್ ನಲ್ಲಿರುವ ಸನ್ ರೈಸ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ವೇಳೆ ಬೆಂಕಿ ದುರಂತವಾಗಿದ್ದು ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ.
ಕೋವಿಡ್-19 ಸೋಂಕಿತರು ದಾಖಲಾಗಿರುವ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದ್ದು ಸುಮಾರು 76 ರೋಗಿಗಳನ್ನು ರಕ್ಷಣೆ ಮಾಡುವ ಕಾರ್ಯ ಮುಂದುವರಿದಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ತಿಳಿಸಿದ್ದಾರೆ.
ಮಾಲ್ ವೊಂದರಲ್ಲಿ ನಡೆಸುತ್ತಿರುವ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಬೆಂಕಿ ದುರಂತವುಂಟಾಗಿದ್ದು, ಸುಮಾರು 23 ಅಗ್ನಿ ಶಾಮಕ ದಳಗಳು ಸ್ಥಳದಲ್ಲಿ ಬೆಂಕಿ ನಂದಿಸುವ, ರೋಗಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಡಿಸಿಪಿ ಪ್ರಶಾಂತ್ ಕದಮ್ ತಿಳಿಸಿದ್ದಾರೆ.
ಬೆಂಕಿ ಹತ್ತಿ ಉರಿಯಲು ಕಾರಣ ಇನ್ನೂ ತಿಳಿದುಬಂದಿಲ್ಲ. ಮಾಲ್ ವೊಂದರಲ್ಲಿ ಆಸ್ಪತ್ರೆ ನಡೆಸುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲ ಸಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 70 ರೋಗಿಗಳನ್ನು ಮತ್ತು ಕೋವಿಡ್ ಸೋಂಕಿತರನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಮುಂಬೈ ಮೇಯರ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಂಬೈ ಮೇಯರ್ ಕಿಶೋರಿ ಪಡ್ನೇಕರ್, ಮಾಲ್ ವೊಂದರಲ್ಲಿ ಆಸ್ಪತ್ರೆ ನಡೆಸುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ಇದು ಅತ್ಯಂತ ಗಂಭೀರ ಪ್ರಕರಣ. ಏಳು ಮಂದಿ ರೋಗಿಗಳು ವೆಂಟಿಲೇಟರ್ ನಲ್ಲಿದ್ದಾರೆ. 70 ಮಂದಿ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದರು.
ಅಗ್ನಿ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದು, ಇದೊಂದು ಗಂಭೀರ ಪ್ರಕರಣವಾಗಿದೆ. ಆಸ್ಪತ್ರೆಯ ವ್ಯವಸ್ಥಾಪಕ ಮಂಡಳಿಯ ನಿರ್ಲಕ್ಷ್ಯತನ ಎದ್ದುಕಾಣುತ್ತಿದೆ. ಈ ಬಗ್ಗೆ ಕೇಸು ದಾಖಲಿಸುತ್ತೇವೆ ಎಂದು ಸನ್ ರೈಸ್ ಆಸ್ಪತ್ರೆಯ ಬೆಂಕಿ ದುರಂತ ಪ್ರಕರಣ ಬಗ್ಗೆ ಮುಂಬೈ ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.