Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಸುನಂದಾ ಪುಷ್ಕರ್ ಸಾವು ಆತ್ಮಹತ್ಯೆ ಅಲ್ಲ, ಹತ್ಯೆಯೂ ಅಲ್ಲ: ದೆಹಲಿ ಕೋರ್ಟ್ ಮುಂದೆ ಶಶಿ ತರೂರ್ ವಾದ

ನವದೆಹಲಿ: ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವು ಆತ್ಮಹತ್ಯೆಯೂ ಅಲ್ಲ, ಹತ್ಯೆಯೂ ಅಲ್ಲ ಎಂದು ಸಾಕ್ಷಿಗಳು ತೋರಿಸುತ್ತಿದ್ದು, ಈ ಪ್ರಕರಣದಲ್ಲಿ ತಮಗೆ ಬಿಡುಗಡೆ ನೀಡಬೇಕೆಂದು ಕಾಂಗ್ರೆಸ್ ನಾಯಕ ಶಶಿ ತರೂರು ದೆಹಲಿ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

ಹಿರಿಯ ನ್ಯಾಯವಾದಿ ವಿಕಾಸ್ ಪಹ್ವ ಮೂಲಕ ದೆಹಲಿ ಕೋರ್ಟ್ ಗೆ ಮನವಿ ಸಲ್ಲಿಸಿದ ಶಶಿ ತರೂರ್, ಒಂದೇ ಒಂದು ಸಾಕ್ಷಿ ಕೂಡ ತಮ್ಮ ಮೇಲೆ ವರದಕ್ಷಿಣೆ, ಹಿಂಸೆ ಅಥವಾ ಇತರ ಕಿರುಕುಳ ನೀಡಿರುವ ಆರೋಪವನ್ನು ಸಾಬೀತುಪಡಿಸುತ್ತಿಲ್ಲ. ಹೀಗಾಗಿ ಪ್ರಕರಣದಿಂದ ತಮಗೆ ಮುಕ್ತಿ ನೀಡಬೇಕೆಂದು ಕೋರಿದರು.

ಕೇಸಿಗೆ ಸಂಬಂಧಪಟ್ಟಂತೆ ಆರೋಪ ಸಾಬೀತುಪಡಿಸುವ ವಾದ ಮಂಡನೆ ಮಾಡುವಾಗ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೊಯೆಲ್ ಮುಂದೆ ಶಶಿ ತರೂರ್ ಅವರ ಪರ ವಕೀಲರು ಈ ರೀತಿ ವಾದ ಮಂಡಿಸಿದರು. ಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ.

ಸುನಂದಾ ಪುಷ್ಕರ್ ಅವರು 2014ರ ಜನವರಿ 17ರಂದು ದೆಹಲಿಯ ಲಕ್ಷುರಿ ಹೊಟೇಲೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದಕ್ಕೆ ಮುನ್ನ ಸುನಂದಾ ಪುಷ್ಕರ್ ಮತ್ತು ಶಶಿ ತರೂರ್ ಅವರು ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು. ಶಶಿ ತರೂರ್ ಅವರ ಅಧಿಕೃತ ನಿವಾಸದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದರಿಂದ ದಂಪತಿ ತಾತ್ಕಾಲಿಕವಾಗಿ ಹೊಟೇಲ್ ಗೆ ಶಿಫ್ಟ್ ಆಗಿದ್ದರು.

ಶಶಿ ತರೂರ್ ಅವರ ವಕೀಲರ ವಾದವೇನು?: ಸುನಂದಾ ಪುಷ್ಕರ್ ಅವರ ನಿಧನ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಅಥವಾ ನಂತರ ವೈದ್ಯಕೀಯ ವರದಿಯಲ್ಲಿ ಅದು ಆತ್ಮಹತ್ಯೆ ಅಥವಾ ಹತ್ಯೆ ಎಂದು ತಿಳಿದುಬಂದಿಲ್ಲ. ಇದು ಆತ್ಮಹತ್ಯೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು  ಗ್ರಹಿಸಲು ಸಾಧ್ಯವಿಲ್ಲ, ಅದಕ್ಕೆ ಸಾಬೀತುಪಡಿಸಬೇಕು, ತರೂರ್ ಅವರ ವಿರುದ್ಧ ಆರೋಪ ಮಾಡುವಾಗ ಅದನ್ನು ಸಾಬೀತುಪಡಿಸಬೇಕಿದೆ ಎಂದರು.

ಸುನಂದಾ ಪುಷ್ಕರ್ ಅವರ ಸಾವನ್ನು ಆಕಸ್ಮಿಕ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಮುಂದೆ ಹಿರಿಯ ವಕೀಲ ಪಹ್ವ ವಾದ ಮಂಡಿಸಿದರು.

ಸುನಂದಾ ಪುಷ್ಕರ್ ಸಾವಿನ ಬಳಿಕ ಶಶಿ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498ಎ ಮತ್ತು 306 ಅಡಿ ಕೇಸು ದಾಖಲಾಗಿದ್ದು ಅವರನ್ನು ಇದುವರೆಗೆ ಬಂಧಿಸಿಲ್ಲ, 2018ರ ಜುಲೈ 5ರಂದು ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.

No Comments

Leave A Comment