ಕೊಲೆಗೆ ಸಂಚು ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು, ನಾಲ್ವರ ಬಂಧನ
ಮಂಗಳೂರು: ಕೊಲೆಗೆ ಸಂಚು ರೂಪಿಸುತ್ತಿದ್ದ ಪ್ರಕರಣವೊಂದನ್ನು ಬೇಧಿಸಿದ ಮಂಗಳೂರು ನಗರ ಪೊಲೀಸರು, ಅಂತರ ರಾಜ್ಯ ಗ್ಯಾಂಗ್ ನ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ರೌಡಿ-ಶೀಟರ್ ಸಹಾಯದಿಂದ ಕೊಲೆ ಸಂಚು ರೂಪಿಸಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಈ ಆರೋಪಿಗಳ ವಿರುದ್ಧ ಈಗಾಗಲೇ ಹಲವು ಕೊಲೆ, ಡ್ರಗ್ಸ್ ಮತ್ತು ಇತರ ಪ್ರಕರಣಗಳು ದಾಖಲಾಗಿವೆ. “ಬಂಧಿತರಾದ ದೀಕ್ಷಿತ್, ಚಂದ್ರಹಾಸ್, ಪ್ರಜ್ವಾಲ್ ಮತ್ತು ಸಂತೋಷ್ ಅಲಿಯಾಸ್ ನಾಯ್ ಸಂಥು, ಮೊದಲು ನೀರಮಾರ್ಗ ಮತ್ತು ಕುಲ್ಶೇಕರ್ ನಲ್ಲಿ ಮೋಟಾರು ಬೈಕುಗಳನ್ನು ಕಳ್ಳತನ ಮಾಡಿದ್ದರು. ನಂತರ ಮತ್ತೊಂದು ಗ್ಯಾಂಗ್ ನ ರೌಡಿ-ಶೀಟರ್ ಗಳ ಹತ್ಯೆಗೆ ಕದ್ದ ವಾಹನಗಳನ್ನು ಬಳಸುತ್ತಿದ್ದರು” ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಸುಮಾರು 15-20 ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಈ ಗ್ಯಾಂಗ್ ಭೂಗತ ಲೋಕದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಪ್ರದೀಪ್ ಮೆಂಡನ್ ಮತ್ತು ಮಂಕಿಸ್ಟ್ಯಾಂಡ್ ವಿಜಯ್ ಗ್ಯಾಂಗ್ ನ ಇಬ್ಬರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬೆಂಗಳೂರು ಜೈಲಿನಲ್ಲಿರುವ ಅಪರಾಧಿ ಜೊತೆ ದೀಕ್ಷಿತ್ ನಿರಂತರ ಸಂಪರ್ಕ ಹೊಂದಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಗ್ಯಾಂಗ್ ಬೈಕ್ಗಳನ್ನು ಕಳ್ಳತನ ಮಾಡುತ್ತಿತ್ತು ಮತ್ತು ವಾಹನ ಮಾಲೀಕರಿಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರು ಎಂದು ಶಶಿಕುಮಾರ್ ತಿಳಿಸಿದ್ದಾರೆ.