Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಹೆಚ್ಚುತ್ತಿರುವ ಕೊರೋನಾ: ಆಂತಕದಿಂದ ಕ್ಯಾಂಪಸ್ ತೊರೆಯಲು ಮಣಿಪಾಲ ಎಂಐಟಿ ವಿದ್ಯಾರ್ಥಿಗಳ ಯತ್ನ

ಉಡುಪಿ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪ್ರಕರಣ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ಹೊರ ಹೋಗಲು ಯತ್ನಿಸುತ್ತಿದ್ದಾರೆಂದು ತಿಳಿದುಬಂದಿದೆ.

ಆರ್’ಟಿಪಿಸಿಆರ್ ನೆಗೆಟಿವ್ ಇರುವ 130 ವಿದ್ಯಾರ್ಥಿಗಳಿಗೆ ಮನೆಗೆ ತೆರಳಲು ಅಧಿಕಾರಿಗಳು 1 ದಿನ ಕಾಲಾವಕಾಶ ನೀಡಿತ್ತು. ಈ ಕುರಿತು ಮಾಹಿತಿ ತಿಳಿದ ಉಳಿದ ವಿದ್ಯಾರ್ಥಿಗಳು, ಕ್ಯಾಂಪಸ್’ನ ಮುಖ್ಯದ್ವಾರದ ಬಳಿ ಜಮಾಯಿಸಿ ಮನೆಗೆ ತೆರಳಲು ಅವಕಾಶ ನೀಡಬೇಕು ಎಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿದರು. ಇದೇ ವೇಳೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕಾರುಗಳಲ್ಲಿ ಬಂದಿದ್ದ ಕೆಲ ಪೋಷಕರು, ಮಕ್ಕಳನ್ನು ಕಳುಹಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಜತೆ ವಾಗ್ವಾದ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಂಟೈನ್‌ಮೆಂಟ್‌ ಪ್ರದೇಶವಾಗಿರುವುದರಿಂದ ವಿದ್ಯಾರ್ಥಿಗಳು ಕ್ಯಾಂಪಸ್ ಬಿಟ್ಟು ಹೊರಬರುವಂತಿಲ್ಲ. ಕೋವಿಡ್‌ ನೆಗೆಟಿವ್ ವರದಿ ಬಂದ ವಿದ್ಯಾರ್ಥಿಗಳನ್ನು ಮನೆಗೆ ತೆರಳಲು ಅವಕಾಶ ನೀಡಲಾಗುವುದು ಎಂದು ಮನವರಿಕೆ ಮಾಡಿಕೊಟ್ಟರು.

ಹೊರ ರಾಜ್ಯ ಹಾಗೂ ವಿದೇಶಗಳಿಗೆ ತೆರಳಲು ಕೋವಿಡ್‌ ನೆಗೆಟಿವ್ ಪ್ರಮಾಣಪತ್ರ ಅಗತ್ಯವಿರುವುದರಿಂದ ಕೋವಿಡ್‌ ಪ್ರಮಾಣಪತ್ರದೊಂದಿಗೆ ತೆರಳಿದರೆ ಒಳಿತು ಎಂದು ಕಾಲೇಜು ಆಡಳಿತ ಮಂಡಳಿಯು ಮನವೊಲಿಸಿದ ಬಳಿಕ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ತೆರಳಿದರು.

ಕ್ಯಾಂಪಸ್’ನ ಮುಖ್ಯದ್ವಾರದ ಬಳಿ ಬಂದ ಕೆಲ ವಿದ್ಯಾರ್ಥಿಗಳು ಆರ್’ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದಿದ್ದರೂ ಮನೆಗೆ ತೆರಳಬೇಕೆಂದು ಆಗ್ರಹಿಸಿದರು, ಹೀಗಾಗಿ ಅವರನ್ನು ತಡೆಯಬೇಕಾಯಿತು ಎಂದು ಮಣಿಪಾಲ್ ಪೊಲೀಸ್ ಠಾಣೆಯ ಇನ್ಸ್’ಪೆಕ್ಟರ್  ಮಂಜುನಾಥ್ ಎಂ ಹೇಳಿದ್ದಾರೆ.

ಸುಮಾರು 5,000 ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಬೇಕಾಗಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಹೆಚ್ಚಿನ ಪರೀಕ್ಷೆಯಲ್ಲಿ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಉಳಿದ ವಿದ್ಯಾರ್ಥಿಗಳ ಪರೀಕ್ಷೆಯನ್ನು ಎರಡನೇ ಹಂತದಲ್ಲಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ 7 ದಿನಗಳ ಬಳಿಕ ಮತ್ತೆ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಮಂಡಳಿ ನಿರ್ಧರಿಸಿದ್ದು, ಈ ವೇಳೆ ನೆಗೆಟಿವ್ ಬಂದವರನ್ನು ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

No Comments

Leave A Comment