ದೀದಿ ‘ಖೇಲ್ ಹೊಬೆ’ ಅಂದರೆ ಬಿಜೆಪಿಯದ್ದು ‘ವಿಕಾಸ್ ಹೊಬೆ’: ಪಶ್ಚಿಮ ಬಂಗಾಳ ಚುನಾವಣಾ ಭಾಷಣದಲ್ಲಿ ಪ್ರಧಾನಿ ಮೋದಿ
ಪುರ್ಲಿಯಾ: ವಿಧಾನಸಭಾ ಚುನಾವಣೆಗೆ ಕೆಲ ದಿನಗಳ ಬಾಕಿ ಇರುವ ಪಶ್ಚಿಮ ಬಂಗಾಳದಲ್ಲಿ ಪ್ರಚಾರದ ಕಣ ರಂಗೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಳಗೊಂಡಂತೆ ಬಿಜೆಪಿಯ ಸ್ಟಾರ್ ಪ್ರಚಾರಕರ ನಡುವಣ ವಾಕ್ಸಮರ ತೀವ್ರಗೊಂಡಿದೆ.
ಪೂರ್ಲಿಯಾದಲ್ಲಿಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದಲಿತರು, ಆದಿವಾಸಿಗಳು ಮತ್ತಿತರ ಹಿಂದುಳಿದ ಸಮುದಾಯಗಳಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕಾರ್ಯೋನ್ಮುಖವಾಗಲಿದೆ. ಮಮತಾ ಬ್ಯಾನರ್ಜಿ ಖೇಲಾ ಹೊಬೆ ಅಂತಾ ಹೇಳಿದ್ರೆ, ಬಿಜೆಪಿ ವಿಕಾಸ್ ಹೊಬೆ ಅಂತಾ ಹೇಳುತ್ತದೆ. ಜನರ ಆಶೋತ್ತರಗಳಿಗೆ ತಕ್ಕಂತೆ ಆಸ್ಪತ್ರೆಗಳು, ಶಾಲೆಗಳು ಇರಲಿವೆ ಎಂದರು.
ಮೊದಲಿಗೆ ಪಶ್ಚಿಮ ಬಂಗಾಳದಲ್ಲಿ ಆಳ್ವಿಕೆ ಮಾಡಿದ ಎಡಪಕ್ಷಗಳು, ತದನಂತರ ಬಂದ ಟಿಎಂಸಿ ಸರ್ಕಾರ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನೀರಾವರಿ ಯೋಜನೆಯಂತಹ ಕಾರ್ಯಗಳನ್ನು ಕೈಗೊಂಡಿಲ್ಲ. ನೀರಿನ ಕೊರತೆಯಿಂದಾಗಿ ಜನತೆ ಅನುಭವಿಸುತ್ತಿರುವ ಸಂಕಷ್ಟಗಳು ನನಗೆ ಗೊತ್ತಿದೆ. ಟಿಎಂಸಿ ಸರ್ಕಾರ ಕೃಷಿಯನ್ನು ಬಿಟ್ಟು, ತನ್ನ ಸ್ವಂತ ಆಟದಲ್ಲಿ ಬ್ಯುಸಿಯಾಗಿದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
ಈ ಭೂಮಿ ಭಗವಾನ್ ರಾಮ್ ಮತ್ತು ಸೀತಾ ದೇವಿಯ ವನವಾಸಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸೀತಾಕುಂಡ್ ಇದೆ. ಸೀತಾ ದೇವಿಗೆ ಬಾಯಾರಿಕೆಯಾಗಿದ್ದಾಗ, ಶ್ರೀ ರಾಮ ಬಾಣ ಹೊಡೆಯುವ ಮೂಲಕ ನೆಲದಿಂದ ನೀರು ಪಡೆದರು ಎಂದು ಹೇಳಲಾಗುತ್ತದೆ. ಅಂತಹ ಇತಿಹಾಸವಿರುವ ಪುರುಲಿಯಾ ಇಂದು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವುದು ವಿಪರ್ಯಾಸ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.