Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಪಿತೂರಿಗಳಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ, ಬಿಜೆಪಿ ವಿರುದ್ಧ ಹೋರಾಟ ಮುಂದುವರಿಸುತ್ತೇನೆ: ಮಮತಾ ಬ್ಯಾನರ್ಜಿ

ಪೂರ್ಲಿಯಾ: ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಪಿತೂರಿಯಿಂದ ನನ್ನನ್ನು  ಪ್ರಚಾರದಿಂದ ತಡೆಯಲು ಸಾಧ್ಯವಿಲ್ಲ, ಬಿಜೆಪಿ ವಿರುದ್ಧ ಹೋರಾಟವನ್ನು ಮುಂದುವರೆಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಂದಿಗ್ರಾಮದಲ್ಲಿ ಗಾಯಗೊಂಡ ಬಳಿಕ ಪೂರ್ಲಿಯಾ ಜಿಲ್ಲೆಯಲ್ಲಿ ಮೊದಲ ಬಾರಿಗೆ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತನ್ನ ಹೃದಯ ಕಾರ್ಯನಿರ್ವಹಿಸುತ್ತಿದ್ದು, ಹೋರಾಟವನ್ನು ಮುಂದುವರೆಸುತ್ತೇನೆ. ಕೆಲ ದಿನಗಳ ಬಳಿಕ ತನ್ನ ಕಾಲು ಉತ್ತಮವಾಗಲಿದೆ. ಬಂಗಾಳದ ಮಣ್ಣಿನಲ್ಲಿ ನಿಮ್ಮ ಕಾಲುಗಳು ಮುಕ್ತವಾಗಿ ತಿರುಗಾಡಬಲ್ಲವೇ ಎಂಬುದನ್ನು ನಾನು ನೋಡುತ್ತೇನೆ ಎಂದು ಯಾರ ಹೆಸರನ್ನು ಉಲ್ಲೇಖಿಸದೆ ಮಮತಾ ಬ್ಯಾನರ್ಜಿ ಹೇಳಿದರು.

ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ದೆಹಲಿಯಿಂದ ಅನೇಕ ಬಿಜೆಪಿ ಮುಖಂಡರು ಬಂದಿದ್ದಾರೆ. ಆದರೆ, ಬಂಗಾಳದಲ್ಲಿ ಬಿಜೆಪಿ ಗೆಲ್ಲುವುದಿಲ್ಲ, 10 ವರ್ಷಗಳ ಟಿಎಂಸಿ ಆಡಳಿತದಲ್ಲಿ ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ಮತ್ತು ಜನ ಪರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿರುವುದಾಗಿ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದರೆ ಜನರ ಮನೆ ಬಾಗಿಲಿಗೆ ಉಚಿತವಾಗಿ ಪಡಿತರ ಪೂರೈಸಲಾಗುವುದು ಎಂದು ಮಮತಾ ಬ್ಯಾನರ್ಜಿ ಭರವಸೆ ನೀಡಿದರು. ಟಿಎಂಸಿ ಸರ್ಕಾರ ಅಧಿಕಾರದಲ್ಲಿ ಮುಂದುವರೆದರೆ ಉಚಿತವಾಗಿ ಪಡಿತರ ಪೂರೈಕೆಯನ್ನು ಮುಂದುವರೆಸಲಾಗುವುದು, ಜನರ ಮನೆ ಬಾಗಿಲಿಗೆ ಪಡಿತರವನ್ನು ಪೂರೈಸಲಾಗುವುದು, ಮೇ ನಂತರ ಜನರು ಪಡಿತರ ಅಂಗಡಿಗಳಿಗೆ ಭೇಟಿ ನೀಡುವ ಅಗತ್ಯವಿರಲ್ಲ ಎಂದರು.

ಎಲ್ಲಾ ವಿಧವೆಯರಿಗೆ 1 ಸಾವಿರ ರೂ. 60 ವರ್ಷ ಮೇಲ್ಪಟ್ಟ ಬಡಕಟ್ಟು ಸಮುದಾಯದವರಿಗೆ 2 ಸಾವಿರ ರೂ. ಪಿಂಚಣಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮಾತ್ರ ಬುಡಕಟ್ಟು ಸಮುದಾಯದ ಭೂಮಿ ಹಕ್ಕನ್ನು ಕಸಿದುಕೊಂಡಿಲ್ಲ ಎಂದು ಅವರು ತಿಳಿಸಿದರು.

ಬಿಜೆಪಿ ನೀಡಿದ್ದ ಭರವಸೆಯಂತೆ 15 ಲಕ್ಷ ಹಣವನ್ನು ಜನರಿಗೆ ನೀಡಿದ್ದೇಯಾ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ತೈಲ, ಗ್ಯಾಸ್ ಬೆಲೆಯನ್ನು ಏರಿಕೆ ಮಾಡುತ್ತಿದೆ. ಬ್ಯಾಂಕ್ ಗಳನ್ನು ಮಾರಾಟ ಮಾಡುವ ಮೂಲಕ ಅಪಾರ ಆದಾಯ ಗಳಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ , ಸಿಪಿಐ(ಎಂ) ಬಿಜೆಪಿಯ ದಲ್ಲಾಳಿಗಳು ಅವರ ಮಾತನ್ನು ನಂಬಬೇಡಿ ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಕಿರುಕುಳ ನೀಡುತ್ತಿದ್ದು, ಅವರ ಬಾಯನ್ನು ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ. ನನಗೆ ಮಾತನಾಡುವ ಸಾಮರ್ಥ್ಯವಿರುವವರೆಗೂ ಧ್ವನಿ ಎತ್ತುವುದನ್ನು ಮುಂದುವರೆಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

No Comments

Leave A Comment