ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿಲ್ಲ, ಭದ್ರತಾ ಸಿಬ್ಬಂದಿಯ ಲೋಪದೋಷದಿಂದ ಗಾಯವಾಗಿದೆ: ಚುನಾವಣಾ ಆಯೋಗ
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆದು ಗಾಯಗಳಾಗಿರುವ ಸಾಧ್ಯತೆಯನ್ನು ಭಾರತೀಯ ಚುನಾವಣಾ ಆಯೋಗದ ಮೂಲಗಳು ತಳ್ಳಿಹಾಕಿವೆ.
ಪಶ್ಚಿಮ ಬಂಗಾಳ ರಾಜ್ಯದ ಚುನಾವಣಾ ವೀಕ್ಷಕರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೀಡಿದ ವರದಿ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಈ ನಿರ್ಧಾರಕ್ಕೆ ಬಂದಿದೆ.
ಚುನಾವಣೆ ಪ್ರಚಾರದ ವೇಳೆ ಅವರಿಗೆ ಒದಗಿಸಲಾದ ಉಸ್ತುವಾರಿ ಭದ್ರತಾ ಸಿಬ್ಬಂದಿಯ ಕಡೆಯಿಂದ ಆದ ಭದ್ರತಾ ಲೋಪದಿಂದ ಗಾಯವಾಗಿದ್ದೇ ಹೊರತು ಅವರ ಮೇಲೆ ದಾಳಿ ನಡೆದಿಲ್ಲ ಎಂದು ಚುನಾವಣಾ ಆಯೋಗ ನಿರ್ಧಾರಕ್ಕೆ ಬಂದಿದೆ.
ಚುನಾವಣೆ ಹೊಸ್ತಿಲಿನಲ್ಲಿ ಪ್ರಚಾರ ವೇಳೆ ನಾಲ್ಕೈದು ಮಂದಿ ತಮ್ಮ ಬಳಿ ಬಂದು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಟಿಎಂಸಿ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.
ನಂದಿಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಗಾಯಗೊಂಡ ಮಮತಾ ಬ್ಯಾನರ್ಜಿಯವರು ನಂತರ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿ ಮೊನ್ನೆ ಬಿಡುಗಡೆಗೊಂಡಿದ್ದಾರೆ. ಅವರು ಇಂದು ಕೋಲ್ಕತ್ತಾದಿಂದ ಹಜ್ರಾದವರೆಗೆ ರೋಡ್ ಶೋ ಕೈಗೊಂಡಿದ್ದು ವೀಲ್ ಚೇರ್ ನಲ್ಲಿಯೇ ಕುಳಿತು ಕೋಲ್ಕತ್ತಾದ ಗಾಂಧಿ ಮೂರ್ತಿಯಿಂದ ಪ್ರಚಾರ ಆರಂಭಿಸಿದರು.