Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ:ಪೌರಕಾರ್ಮಿಕರಿಗೆ ಹಲ್ಲೆ: ಈರ್ವರ ದಸ್ತಗಿರಿ

ಉಡುಪಿ: ಸಿಟಿ ಬಸ್ ನಿಲ್ದಾಣ ಬಳಿಯ ಅಂಜುಮಾನ್ ಮಸೀದಿ ಎದುರಿನ ಖಾಸಗಿ ವಾಣಿಜ್ಯ ಮಳಿಗೆಗಳಿಂದ ಶುಕ್ರವಾರ ಕಸ ಸಂಗ್ರಹಿಸಲು ಬಂದ ಪೌರ ಕಾರ್ಮಿಕನ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಸಂಜು ಮಾದರ್, ನಗರ ಠಾಣೆಗೆ ನೀಡಿದ ದೂರಿನ ಮೇರೆಗೆ ಆಸ್ಮಾ ಎಲೆಕ್ಟ್ರಾನಿಕ್ಸ್ ನ ಇಸ್ಮಾಯಿಲ್ ಹಾಗೂ ಸೋಹೆಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಏನು?
ಇಲ್ಲಿನ ಸಿಟಿ ಬಸ್ ನಿಲ್ದಾಣ ಸುತ್ತಮುತ್ತ ಎಂದಿನಂತೆ ಕಸ ಸಂಗ್ರಹಿಸಲು ಬಂದಿದ್ದ ಸಿಬ್ಬಂದಿ ಒಣ ಹಾಗೂ ಹಸಿ ಕಸ ಬೇರ್ಪಡಿಸಿ ಕೊಡುವಂತೆ ಅಂಗಡಿ ಮಾಲೀಕರಿಗೆ ಮಾದರ್ ಹೇಳಿದ್ದು, ಅದರಿಂದ ಸಿಟ್ಟಿಗೆದ್ದ ಇಸ್ಮಾಯಿಲ್ ಹಾಗೂ ಸೋಹೆಲ್ ಕಸ ಬೇರ್ಪಡಿಸಿಕೊಳ್ಳುವಂತೆ ಪೌರ ಕಾರ್ಮಿಕರಿಗೇ ದಬಾಯಿಸಿದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಂಜು ಮಾದರ್ ಮೇಲೆ ಹಲ್ಲೆ ನಡೆಸಲಾಯಿತು.

ಆರೋಪಿಗಳ ವಿರುದ್ಧ ಹಲ್ಲೆ ಹಾಗೂ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಉಡುಪಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಮೋದ್ ಖಂಡನೆ
ಪೌರಕಾರ್ಮಿಕನ ಮೇಲಿನ ಹಲ್ಲೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಖಂಡಿಸಿದ್ದಾರೆ. ನಗರದ ಸ್ವಚ್ಛತೆ ಕಾಪಾಡುವ ಹೊಣೆಹೊತ್ತಿರುವ ಪೌರಕಾರ್ಮಿಕರ ಶ್ರಮ ಗೌರವಿಸಿ ಅವರಿಗೆ ಸೂಕ್ತ ಭದ್ರತೆ ನೀಡಬೇಕು. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಪಿ ವಿಷ್ಣುವರ್ಧನ್ ಅವರಿಗೆ ತಿಳಿಸಿರುವುದಾಗಿ ಪ್ರಮೋದ್ ಟ್ವೀಟ್ ಮಾಡಿದ್ದಾರೆ.

ಶ್ರೀರಾಮಸೇನೆ ಖಂಡನೆ
ಮೋದಿ ಕನಸಿನ ಸ್ವಚ್ಛ ಭಾರತ ಕಲ್ಪನೆಗೆ ಪೂರಕವಾಗಿ ಉಡುಪಿ ನಗರ ಸ್ವಚ್ಛವಾಗಿಡಲು ಅತೀ ಕಡಿಮೆ ವೇತನದಲ್ಲಿ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಪೌರ ಕಾರ್ಮಿಕನ ಮೇಲೆ ನಡೆದ ಹಲ್ಲೆಯನ್ನು ಶ್ರೀರಾಮ ಸೇನೆ ಖಂಡಿಸುವುದಾಗಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ತಿಳಿಸಿದ್ದಾರೆ.

ಇದು ಹಿಂದೂಗಳ ಮೇಲೆ ನಡೆದ ಹಲ್ಲೆ ಎಂದರೂ ತಪ್ಪಾಗದು. ಹಲ್ಲೆ ಮಾಡಿದ ವ್ಯಕ್ತಿ ಯಾರೇ ಆಗಿದ್ದರೂ ಸರ್ಕಾರ ಹಾಗೂ ಗೃಹ ಇಲಾಖೆ ಕೂಡಲೇ ಬಂಧಿಸಬೇಕು.

ಶ್ರೀರಾಮಸೇನೆ ಪೌರಕಾರ್ಮಿಕರಿಗೆ ಸಂಪೂರ್ಣ ಬೆಂಬಲ ನೀಡುವುದರೊಂದಿಗೆ, ತಪ್ಪಿತಸ್ಥರನ್ನು ತಕ್ಷಣ ಬಂಧಿಸದಿದ್ದಲ್ಲಿ ಸಮಾನಮನಸ್ಕರನ್ನು ಜೊತೆಯಾಗಿಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ

No Comments

Leave A Comment