ಭರ್ಜರಿ ಕಾರ್ಯಾಚರಣೆ: ಕಾಶ್ಮೀರದಲ್ಲಿ ಹಿಜ್ಬುಲ್ ಸಂಘಟನೆಯ 7 ಉಗ್ರರ ಬಂಧನ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರಿದ 7 ಮಂದಿ ಉಗ್ರರನ್ನು ವಶಕ್ಕೆ ಪಡೆದಿವೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಸಹಚರ ಜಾಲವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನಾಪಡೆಗಳು ಪತ್ತೆ ಮಾಡಿದ್ದು,ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಏಳು ಸಹಚರರನ್ನು ಬಂಧಿಸಿವೆ.
ಈ ಬಗ್ಗೆ ಶೋಪಿಯಾನ್ ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದು, ‘ಖಚಿತ ಮಾಹಿತಿಯನ್ನಾಧರಿಸಿ ಪೊಲೀಸ್ ಪಡೆಗಳು ನಿನ್ನೆ ರಾತ್ರಿ ದಾಳಿ ನಡೆಸಿ, ಶೋಪಿಯಾನ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಏಳು ಸಹಚರರನ್ನು ಬಂಧಿಸಿವೆ ಎಂದು ಅವರು ಹೇಳಿದ್ದಾರೆ.
ಈ ಏಳೂ ಮಂದಿ ಸಹಚರರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಾಗಿ ಗ್ರೌಂಡ್ ವರ್ಕ್ (ಉಗ್ರ ಸಂಘಟನೆಗೆ ಬೇಕಾದ ಎಲ್ಲ ರೀತಿಯ ನೆರವು ನೀಡುವವರು) ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಬಂಧಿತರಿಂದ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಶೋಪಿಯಾನ್ ಪೊಲೀಸರು ಇದೀಗ ತಮ್ಮ ಕಾರ್ಯಾಚರಣೆಯನ್ನು ಬಿಗಿ ಮಾಡಿದ್ದು, ಮತ್ತಷ್ಟು ಉಗ್ರ ಸಹಚರರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.