‘ಹಿಂದಿ ಟಿವಿ ಜಗತ್ತಿನ ರಾಣಿ’ ಏಕ್ತಾ ಕಪೂರ್ ವಿರುದ್ಧ ನಟ ಸುನಿಲ್ ಶೆಟ್ಟಿ ದೂರು
ಮುಂಬೈ: ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದಾರೆ.
ಸುನಿಲ್ ಶೆಟ್ಟಿ ಅವರು ‘ವಿನೀತ್’ ಹೆಸರಿನ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎಂದು ಕೆಲವು ದಿನಗಳ ಹಿಂದಷ್ಟೆ ಪತ್ರಿಕೆಯೊಂದರಲ್ಲಿ ವರದಿ ಹಾಗೂ ಜಾಹೀರಾತು ಪ್ರಕಟವಾಗಿತ್ತು. ಸುನಿಲ್ ಶೆಟ್ಟಿ ಅವರ ಪೋಸ್ಟರ್ ಒಂದನ್ನು ಸಹ ಪ್ರಕಟಿಸಲಾಗಿತ್ತು.
ತಮ್ಮ ಅನುಮತಿ ಇಲ್ಲದೆ ತಮ್ಮ ಚಿತ್ರ ಪ್ರಕಟಿಸಿದ್ದಕ್ಕಾಗಿ ಸುನಿಲ್ ಶೆಟ್ಟಿ ಅವರು ಆ ಪತ್ರಿಕೆ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದೇ ದೂರಿನಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ ಒಡೆತನದ ನಿರ್ಮಾಣ ಸಂಸ್ಥೆಯು ತಮ್ಮ ಅನುಮತಿ ಇಲ್ಲದೆ ತಮ್ಮ ಚಿತ್ರವನ್ನು ಪ್ರಕಟಿಸಿದೆ, ಅಲ್ಲದೆ ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಿಸಿದೆ ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೆ, ಏಕ್ತಾ ಕಪೂರ್ ಅವರ ಸಂಸ್ಥೆಯು ತಾವು ಸುನಿಲ್ ಶೆಟ್ಟಿ ಅವರೊಟ್ಟಿಗೆ ಸಿನಿಮಾ ಮಾಡುತ್ತಿದ್ದು, ತಮಗೆ ಹಣದ ಅವಶ್ಯಕತೆ ಇದೆ ಎಂದು ಕೆಲವರ ಬಳಿ ಹಣ ಸಹ ವಸೂಲಿ ಮಾಡಿದೆ ಎಂದು ಸುನಿಲ್ ಶೆಟ್ಟಿ ಆರೋಪಿಸಿದ್ದಾರೆ.
ನಟಿ ಏಕ್ತಾ ಕಪೂರ್ ಅವರು ಬಾಲಾಜಿ ಟೆಲಿಫಿಲ್ಮಂ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಹಿಂದಿ ಟಿವಿ ಜಗತ್ತಿನ ರಾಣಿಯೆಂದು ಏಕ್ತಾ ಅವರನ್ನು ಕರೆಯಲಾಗುತ್ತದೆ. ಹಲವಾರು ಟಿವಿ ಧಾರಾವಾಹಿ ನಿರ್ಮಿಸಿಸರುವ ಏಕ್ತಾ ಕಪೂರ್ ಕೆಲವು ಸಿನಿಮಾಗಳು, ವೆಬ್ ಸರಣಿಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.