ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ನಟಿ ತಾಪ್ಸಿ ಪನ್ನು ವಿರುದ್ದ ಆದಾಯ ತೆರಿಗೆ ಇಲಾಖೆ ದಾಳಿ, ಶೋಧ
ಮುಂಬೈ/ನವದೆಹಲಿ: ತೆರಿಗೆ ವಂಚನೆ ಆರೋಪದ ಮೇಲೆ ಬೃಹತ್ ಕಾರ್ಯಾಚರಣೆಗಿಳಿದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬಾಲಿವುಡ್ ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ತಾಪ್ಸಿ ಪನ್ನು, ಚಿತ್ರ ನಿರ್ಮಾಪಕ ವಿಕಾಸ್ ಬಾಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮತ್ತು ವಿಕಾಸ್ ಬಹ್ಲ್ ಅವರ ನಿವಾಸ, ಆಸ್ತಿಪಾಸ್ತಿಗಳು, ಕಚೇರಿ ಸೇರಿದಂತೆ ಮುಂಬೈ ಮತ್ತು ಪುಣೆಯ ಸುಮಾರು 20 ಕಡೆಗಳಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಐಎಎನ್ಎಸ್ ಸುದ್ದಿಸಂಸ್ಥೆಗೆ ತಿಳಿಸಿವೆ.
ಈ ಸೆಲೆಬ್ರಿಟಿಗಳು ಮುಂಬೈಯಲ್ಲಿ ತಮ್ಮ ನಿವಾಸ ಮತ್ತು ಕಚೇರಿ ಹೊಂದಿದ್ದು, ಅವುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಶೋಧ ನಡೆಸಿರುವುದಾಗಿ ಹೇಳಲಾಗಿದೆ. ಅನುರಾಗ್ ಕಶ್ಯಪ್ ಅವರೊಂದಿಗೆ ಫ್ಯಾಂಟಮ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ನ ಸಹ ಮಾಲೀಕತ್ವವನ್ನು ನಿರ್ಮಾಪಕ ಮಧು ಮಂಟೆನಾ ಹೊಂದಿದ್ದು, ಅವರ ಮನೆಯ ಮೇಲೂ ಐಟಿ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.
ಕಳೆದ ವರ್ಷ ನವೆಂಬರ್ 26ರಿಂದ ದೇಶದ ರಾಜಧಾನಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಈ ಮೂವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹರಿಬಿಡುತ್ತಾ ರೈತರಿಗೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ.