ಮತ್ತೆ ಒಕ್ಕರಿಸಿದ ಲಾಕ್ ಡೌನ್ ಭೂತ, ಅಮರಾವತಿಯಲ್ಲಿ ಒಂದು ವಾರ ಸಂಪೂರ್ಣ ಲಾಕ್ ಡೌನ್! ಮುಂಬೈ: ಮಾರಕ ಕೊರೋನಾ ಸೋಂಕು ಸಾಂಕ್ರಾಮಿಕದಿಂದಾಗಿ ಕಂಡು ಕೇಳರಿಯದ ರೀತಿಯಲ್ಲಿ ಲಾಕ್ ಡೌನ್ ಗೆ ತುತ್ತಾಗಿ ಹೈರಾಣಿಗಿದ್ದ ಭಾರತದಲ್ಲಿ ಇದೀಗ ಲಾಕ್ ಡೌನ್ ಜಾರಿಯಾಗುವ ಭೀತಿ ಎದುರಾಗಿದ್ದು, ಈಗಾಗಲೇ ಅಮರಾವತಿಯಲ್ಲಿ ಒಂದು ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಹೌದು.. ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಆ ರಾಜ್ಯ ಅಮರಾವತಿಯಲ್ಲಿ ಒಂದು ವಾರ್ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಸೋಮವಾರ ಅಂದರೆ ಇಂದು ಸಂಜೆಯಿಂದಲೇ ಲಾಕ್ಡೌನ್ ನಿಯಮ ಜಾರಿಗೆ ಬರಲಿದ್ದು. ಮುಂದಿನ ಏಳು ದಿನ ಲಾಕ್ಡೌನ್ ಜಾರಿಯಲ್ಲಿರಲಿದೆ. ಈ ವೇಳೆ ಕೇವಲ ಅಗತ್ಯ ಸೇವೆಗಳು ಮಾತ್ರ ಸಿಗಲಿವೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಸಚಿವೆ ಯಶೋಮತಿ ಠಾಕೂರ್, ಅಮರಾವತಿಯ ಅಚಲ್ ನಗರವನ್ನು ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಈ ಸಮಯದಲ್ಲಿ ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಈ ಹಿಂದೆಯೇ ಅಮರಾವತಿಯಲ್ಲಿ ವಾರಾಂತ್ಯದಲ್ಲಿ ಲಾಕ್ಡೌನ್ ಅನ್ನು ಜಿಲ್ಲಾಡಳಿತ ಘೋಷಿಸಿದ್ದು, ಶನಿವಾರ ರಾತ್ರಿ 8 ಗಂಟೆಯಿಂದ ಆರಂಭಗೊಂಡು ಸೋಮವಾರ ಬೆಳಿಗ್ಗೆ 7 ಗಂಟೆಯ ವರೆಗೆ ಲಾಕ್ ಡೌನ್ ಜಾರಿಗೆ ತಂದಿತ್ತು. ಆದರೂ ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಇದೀಗ ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. Share this:TweetWhatsAppEmailPrintTelegram