Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ತಿಂಗಳುಗಳ ನಿರಾಕರಣೆ ಬಳಿಕ ಗಲ್ವಾನ್ ಕಣಿವೆಯಲ್ಲಿ ತನ್ನ “ಸೈನಿಕರ ಸಾವಿನ” ಸತ್ಯ ಬಹಿರಂಗಪಡಿಸಿದ ಚೀನಾ: ವಿಡಿಯೋ!

ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದ ಚೀನಾಗೆ ಭಾರತೀಯ ಯೋಧರು ಭರ್ಜರಿ ಪ್ರತಿಕ್ರಿಯೆಯನ್ನೇ ನೀಡಿದ್ದರು.

ಭಾರತದ ತಿರುಗೇಟಿಗೆ ಚೀನಾದಲ್ಲಿ ಹಲವು ಯೋಧರು ಬಲಿಯಾಗಿದ್ದಾರೆ ಎಂದು ಜಗತ್ತೇ ಹೇಳುತ್ತಿದ್ದರೂ ಚೀನಾ ಮಾತ್ರ ಈ ವರೆಗೆ ತನ್ನ ಕಡೆಯ ಜೀವಹಾನಿಯನ್ನು ನಿರಾಕರಿಸುತ್ತಲೇ ಬಂದಿತ್ತು. ಈಗ ಮೊದಲ ಬಾರಿಗೆ ಚೀನೀ ಯೋಧರ ಸಾವಿನ ಬಗ್ಗೆ  ಮಾತನಾಡಿದೆ .

ತಿಂಗಳುಗಳ ಕಾಲ ನಿರಾಕರಣೆಯಲ್ಲೇ ಇದ್ದ ಚೀನಾ, ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದೇ ಮೊದಲ ಬಾರಿಗೆ ಚೀನಾದ ಯೋಧರು ಸಾವನ್ನಪ್ಪಿರುವ ಬಗ್ಗೆ ಮಾತನಾಡಿದ್ದು, ಜೂನ್-2020 ರಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ ನಲ್ವರು ಯೋಧರು ಸಾವನ್ನಪ್ಪಿರುವುದು ನಿಜ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಹೇಳಿದೆ.

ಗ್ಲೋಬಲ್ ಟೈಮ್ಸ್ ನ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ಮಾಹಿತಿಯನ್ನು ಚೀನಾ ಬಹಿರಂಗಗೊಳಿಸಿದ್ದು ವಿಡಿಯೋವನ್ನೂ ಪೋಸ್ಟ್ ಮಾಡಿದೆ. ಗಲ್ವಾನ್ ಕಣಿವೆಯಲ್ಲಿ ಮೃತಪಟ್ಟ ಚೀನಾದ ಯೋಧರ ಹೆಸರು ಹಾಗೂ ವಿವರಗಳ ಸಹಿತವಾಗಿ ಚೀನಾ ಮಾಹಿತಿಯನ್ನು ಬಹಿರಂಗಪಡಿಸಿದ್ದು, ರಾಷ್ಟ್ರೀಯ ಸಾರ್ವಭೌಮತ್ವವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಯೋಧರ ಬಲಿದಾನವನ್ನು ದೇಶ ಗೌರವಿಸುತ್ತದೆ ಎಂದು ಚೀನಾ ಹೇಳಿದೆ.

ಗಲ್ವಾನ್ ಕಣಿವೆಯಲ್ಲಿ ಸೇನಾ ತುಕಡಿಗಳನ್ನು ಮುನ್ನಡೆಸಿದ್ದ ಕರ್ನಲ್ ಶ್ರೇಣಿಯ ಸೈನಾ ಅಧಿಕಾರಿ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಇವರಿಗೆ ಫೆ.19 ರಂದು ಗೌರವ ಶೀರ್ಷಿಕೆ (ಪ್ರಶಸ್ತಿ) ನೀಡಲಾಗಿದೆ, ಹುತಾತ್ಮರಾದ ನಾಲ್ವರು ಯೋಧರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ ಎಂದು ಚೀನಾದ ಕೇಂದ್ರ ಮಿಲಿಟರಿ ಆಯೋಗ ಹೇಳಿರುವುದನ್ನು ಪೀಪಲ್ಸ್ ಡೈಲಿ ಚೀನಾ ಟ್ವೀಟ್ ಮಾಡಿದೆ.

ಚೀನಾದೊಂದಿಗಿನ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಘರ್ಷಣೆಯ ಬಗ್ಗೆ ವರದಿ ಪ್ರಕಟಿಸಿದ್ದ ರಷ್ಯಾದ ಸುದ್ದಿ ವಾಹಿನಿಯ ಪ್ರಕಾರ ಚೀನಾದ 45 ಯೋಧರು ಗಲ್ವಾನ್ ಕಣಿವೆ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು.

No Comments

Leave A Comment