ಜಮ್ಮು-ಕಾಶ್ಮೀರದ ರಿಯಾಸಿಯಲ್ಲಿ ಉಗ್ರರ ಅಡಗುತಾಣ ಪತ್ತೆ: ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಹೋರ್ ನಲ್ಲಿನ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣ ಪತ್ತೆ ಮಾಡಿರುವ ಭದ್ರತಾ ಪಡೆಗಳು, ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಜಂಟಿ ತಂಡಗಳು ರಿಯಾಸಿ ಜಿಲ್ಲೆಯ ಮಖಿದಾರ್ ಅರಣ್ಯದಲ್ಲಿ ಬುಧವಾರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ರಿಯಾಸಿ ಜಿಲ್ಲೆಯ ಮಖಿದಾರ್ನ ದೂರದ ಮತ್ತು ದಟ್ಟ ಕಾಡುಗಳಲ್ಲಿ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಪಡೆದ ಈ ಕಾರ್ಯಾಚರಣೆ ನಡೆಸಲಾಗಿತ್ತು.
ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಪೈಕಿ ಒಂದು ಎಕೆ 47 ರೈಫಲ್, ಒಂದು ಎಸ್ಎಲ್ ರೈಫಲ್, ಒಂದು 303 ಬೋಲ್ಟ್ ರೈಫಲ್, ಎರಡು ಚೈನೀಸ್ ಪಿಸ್ತೂಲ್, ಮದ್ದುಗುಂಡು ಹೊಂದಿರುವ ಒಂದು ಪಿಸ್ತೂಲ್, ಆಂಟೆನಾದೊಂದಿಗೆ ಎರಡು ರೇಡಿಯೊ ಸೆಟ್ಗಳು, ಒಂದು ಎಕೆ 47 ಮದ್ದುಗುಂಡು ಪೆಟ್ಟಿಗೆ, ನಾಲ್ಕು ಯುಬಿಜಿಎಲ್ ಗ್ರೆನೇಡ್ಗಳು ಸೇರಿವೆ.