Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ತಮಿಳು ನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ, 30ಕ್ಕೂ ಅಧಿಕ ಮಂದಿಗೆ ಗಾಯ

ಚೆನ್ನೈ: ತಮಿಳುನಾಡಿನ ವಿರುಧ್ ನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. 30ಕ್ಕೂ ಅಧಿಕ ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಚೆನ್ನೈಯಿಂದ 500 ಕಿಲೋ ಮೀಟರ್ ದೂರದಲ್ಲಿರುವ ವಿರುಧ್ ನಗರ ಜಿಲ್ಲೆಯ ಅಚಂಕುಲಂ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಗರ್ಭಿಣಿ, ಕಾಲೇಜು ವಿದ್ಯಾರ್ಥಿ ಸೇರಿದಂತೆ 19 ಮಂದಿ ಮೃತಪಟ್ಟಿದ್ದು, ದುರ್ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಪ್ರಧಾನಿ, ಮುಖ್ಯಮಂತ್ರಿ ಪರಿಹಾರ: ಪಟಾಕಿ ಕಾರ್ಖಾನೆ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನ ಮಂತ್ರಿ ಮತ್ತು ತಮಿಳು ನಾಡಿನ ಮುಖ್ಯಮಂತ್ರಿ ತಲಾ 2 ಲಕ್ಷ ಮತ್ತು 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರೆ, ಗಂಭೀರವಾಗಿ ಗಾಯಗೊಂಡವರ ಕುಟುಂಬಗಳಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂಪಾಯಿ ಮತ್ತು ಮುಖ್ಯಮಂತ್ರಿ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ದುರ್ಘಟನೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮಿಳು ನಾಡಿನ ವಿರುಧ್ ನಗರದಲ್ಲಿ ಸಂಭವಿಸಿದ ಪಟಾಕಿ ಫ್ಟಾಕ್ಟರಿ ದುರಂತ ತೀವ್ರ ದುಃಖವನ್ನುಂಟುಮಾಡಿದೆ. ಮೃತಪಟ್ಟವರ ಕುಟುಂಬಸ್ಥರಿಗೆ ಈ ಸಂದರ್ಭದಲ್ಲಿ ನಾನು ಸಾಂತ್ವನ ಹೇಳುತ್ತೇನೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಸ್ಫೋಟದಲ್ಲಿ 10 ಕೋಠಡಿಗಳು ನಾಶವಾಗಿದ್ದು, ಘಟನೆ ನಡೆದಾಗ ಕನಿಷ್ಟ 50 ಮಂದಿ ಕಾರ್ಮಿಕರು ಒಳಗಡೆ ಇದ್ದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗಣೇಶನ್ ಹೇಳಿದ್ದಾರೆ.ನಿನ್ನೆ ಮಧ್ಯಾಹ್ನ 1.30ರ ಹೊತ್ತಿಗೆ ಈ ಘಟನೆ ನಡೆದಿದೆ.

ರಾಸಾಯನಿಕಗಳನ್ನು ಬೆರೆಸುವಾಗ ಉಂಟಾಗುವ ಘರ್ಷಣೆಯು ಸ್ಫೋಟಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಗಣೇಶನ್ ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.

ಮೂವರ ಬಂಧನ: ಫ್ಯಾಕ್ಟರಿಗೆ ಪರವಾನಗಿ ನೀಡಿದ ಶಂತನಮಾರಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 

ಸ್ಫೋಟದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ, 9 ಮಂದಿ ಸಜೀವ ದಹನವಾಗಿದ್ದಾರೆ. ಇನ್ನು 9 ಮಂದಿ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟಿದ್ದಾರೆ. ಫ್ಯಾಕ್ಟರಿಯ ಸುಮಾರು 15 ಕೊಠಡಿಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ಇನ್ನು 13 ಕೊಠಡಿಗಳು ಭಾಗಶಃ ಹಾನಿಗೊಳಗಾಗಿವೆ.

ನಿನ್ನೆಯ ದುರ್ಘಟನೆ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ತಮಿಳು ನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಪಟಾಕಿ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವಾಗ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಇನ್ನು ಬೇಸಿಗೆ ಕಾಲ ಆರಂಭವಾಗುವುದರಿಂದ ಉತ್ಪಾದಕರು ಸೂಕ್ತ ಎಚ್ಚರಿಕೆಯೊಂದಿಗೆ ಭದ್ರತೆ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಮುನ್ನೆಚ್ಚರಿಕೆ, ಭದ್ರತೆ ಕ್ರಮವಾಗಿ ಜಿಲ್ಲಾಧಿಕಾರಿಗಳು ಇನ್ನು ಮುಂದೆ ಕಾಲಕಾಲಕ್ಕೆ ಪಟಾಕಿ ಕಾರ್ಖಾನೆಗಳನ್ನು ಪರಿಶೀಲಿಸುತ್ತಿರಬೇಕು ಎಂದು ಆದೇಶ ನೀಡಿದ್ದಾರೆ.

No Comments

Leave A Comment