Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಸರ್ಕಾರಿ ವಿಮಾನದಲ್ಲಿ ಪ್ರಯಾಣಿಸಲು ರಾಜ್ಯಪಾಲರಿಗೆ ಅನುಮತಿ ನಿರಾಕರಿಸಿದ ಮಹಾ ಸರ್ಕಾರ!

ಮುಂಬೈ: ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರ- ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನಡುವಿನ ತಿಕ್ಕಾಟ ಮತ್ತೊಂದು ಹಂತ ತಲುಪಿದ್ದು, ಸರ್ಕಾರಿ ವಿಮಾನದಲ್ಲಿ ತೆರಳುವುದಕ್ಕೆ ರಾಜ್ಯಪಾಲರಿಗೆ ಮಹಾರಾಷ್ಟ್ರ ಸರ್ಕಾರ ಅನುಮತಿ ನಿರಾಕರಿಸಿದೆ.

ಫೆ.11 ರಂದು ರಾಜ್ಯಪಾಲ ಕೋಶಿಯಾರಿಯವರು ಉತ್ತರಾಖಂಡ್ ನ ಡೆಹ್ರಾಡೂನ್ ಗೆ ಪ್ರಯಾಣ ಮಾಡಬೇಕಿತ್ತು, ಇದಕ್ಕಾಗಿ ಸರ್ಕಾರಿ ವಿಮಾನವನ್ನೂ ಕಾಯ್ದಿರಿಸಲಾಗಿತ್ತು. ಆದರೆ ಕೊನೆ ಗಳಿಗೆ ವರೆಗೂ ರಾಜ್ಯಪಾಲರಿಗೆ ಅನುಮತಿ ಸಿಗದೇ ಕೊನೆಗೆ ವಾಣಿಜ್ಯ ಪ್ರಯಾಣಿಕರ ವಿಮಾನವನ್ನೇ ಬಳಸಿ ಪ್ರಯಾಣ ಮಾಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಕೇಳಿದ್ದಕ್ಕೆ ” ಘಟನೆ ಬಗ್ಗೆ ಏನೂ ಗೊತ್ತಿಲ್ಲ, ಮಾಹಿತಿ ಪಡೆದ ನಂತರವಷ್ಟೇ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ಈ ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಉದ್ಧವ್ ಠಾಕ್ರೆ ಸರ್ಕಾರ ರಾಜ್ಯಪಾಲರಿಗೆ ಕ್ಷಮೆ ಕೇಳಬೇಕೆಂದು ಹೇಳಿದೆ.ರಾಜ್ಯಪಾಲ ಕೋಶಿಯಾರಿ ಅವರು ಫೆ.12 ರಂದು ಮಸ್ಸೂರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ತರಾಖಂಡ್ ಗೆ ತೆರಳಿದ್ದಾರೆ.  ಫೆ.11 ರಂದು ಬೆಳಿಗ್ಗೆ 10 ಮುಂಬೈ ನಿಂದ ಅವರು ಹೊರಡಬೇಕಿತ್ತು.

ಸಾಮಾನ್ಯವಾಗಿ ರಾಜ್ಯಪಾಲರು ಸರ್ಕಾರಿ ವಿಮಾನದಲ್ಲಿ ತೆರಳುವುದಕ್ಕೆ ಅನುಮತಿಗಾಗಿ ಕಾಯುವುದಿಲ್ಲ, ಅಂತೆಯೇ ಕೋಶಿಯಾರಿಯವರೂ ಬೆಳಿಗ್ಗೆ ವಿಮಾನ ಹತ್ತಿ ಕುಳಿತರು. ಆದರೆ ಪೈಲಟ್ ಮಾತ್ರ ತನಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರ ಕಚೇರಿಯಿಂದ ಬೇರೆ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿ ಮಧ್ಯಾಹ್ನ 12.15 ಸುಮಾರಿಗೆ ಡೆಹ್ರಾಡೂನ್ ಗೆ ಪ್ರಯಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಈ ಘಟನೆಯನ್ನು ರಾಜ್ಯಪಾಲರಿಗೆ ಸರ್ಕಾರ ಮಾಡಿರುವ ಅವಮಾನ ಎಂದು ಹೇಳಿದ್ದು, ಗೊತ್ತಿಲ್ಲದೇ ಈ ರೀತಿಯಾಗಿದ್ದರೆ, ಅನುಮತಿ ನೀಡಲು ತಡ ಮಾಡಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು, ಉದ್ದೇಶಪೂರ್ವಕವಾಗಿ ಮಾಡಿದ್ದರೆ, ಇದು ರಾಜ್ಯಕ್ಕೆ ಆದ ಅವಮಾನವಾಗಿದ್ದು ಸರ್ಕಾರ ಕ್ಷಮೆಯಾಚಿಸಬೇಕೆಂದು ಬಿಜೆಪಿ ನಾಯಕ ಸುಧೀರ್ ಮುಂಗಂಟಿವರ್ ಆಗ್ರಹಿಸಿದ್ದಾರೆ.

ನವೆಂಬರ್ 2020 ರ ಮೊದಲ ವಾರದಲ್ಲಿ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ ರಾಜ್ಯಪಾಲರ ಖೋಟಾದ ಅಡಿಯಲ್ಲಿ ಪರಿಷತ್ ಗೆ ನಾಮ ನಿರ್ದೇಶನಗೊಳ್ಳಬೇಕಿದ್ದ ಸದಸ್ಯರ ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಿಕೊಟ್ಟಿತ್ತು. 12 ಸದಸ್ಯರ ಪಟ್ಟಿಗೆ ಸಹಿ ಹಾಕುವುದಕ್ಕೆ ರಾಜ್ಯಪಾಲರು ವಿಳಂಬ ಮಾಡುತ್ತಿರುವುದನ್ನು ಕೋರ್ಟ್ ನಲ್ಲಿ ಪ್ರಶ್ನಿಸಲು ಸರ್ಕಾರ ಮುಂದಾಗಿತ್ತು. ಇದರ ಬೆನ್ನಲ್ಲೇ ರಾಜ್ಯಪಾಲರಿಗೆ ಸರ್ಕಾರಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ವಿಳಂಬ ಮಾಡಿ ಅವಮಾನ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

No Comments

Leave A Comment