ಉತ್ತರಾಖಂಡದಲ್ಲಿ ಹಿಮಸ್ಫೋಟ: ಭಾರಿ ಪ್ರವಾಹದ ಆತಂಕ, 150 ಮಂದಿ ನಾಪತ್ತೆ, 50ಕ್ಕೂ ಹೆಚ್ಚು ಸಾವು ಶಂಕೆ, ರಾಜ್ಯಾದ್ಯಂತ ಹೈ ಅಲರ್ಟ್
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರಿ ಹಿಮಸ್ಫೋಟ ಸಂಭವಿಸಿದ್ದು, ನೈಸರ್ಗಿಕ ವಿಕೋಪ ಕೇಂದ್ರ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರವಾಹದ ಕುರಿತು ಹೈ ಅಲರ್ಟ್ ಘೋಷಣೆ ಮಾಡಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಸ್ಫೋಟಗೊಂಡಿದ್ದು, ಹಿಮನದಿ ಸ್ಪೋಟದಿಂದಾಗಿ ಧೌಲಿಗಂಗಾ ನದಿಯಲ್ಲಿನ ಹಿಮದ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಪರಿಣಾಮ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಹರಿದ್ವಾರ ಮತ್ತು ರಿಷಿಕೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹುಟ್ಟಿಸಿದೆ.
ಹಿಮನದಿ ಸ್ಫೋಟಗೊಂಡ ಮಾಹಿತಿ ಮೇರೆಗೆ ಆಡಳಿತ ತಂಡ ಸ್ಥಳಕ್ಕೆ ತೆರಳಿದ್ದು, ಪೊಲೀಸರು ಧ್ವನಿವರ್ಧಕಗಳ ಮೂಲಕ ನದಿಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದಾರೆ. ಅಂತೆಯೇ ಕೂಡಲೇ ತಗ್ಗು ಪ್ರದೇಶ ಮತ್ತು ನದಿ ಪಾತ್ರದಲ್ಲಿರುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಚಮೋಲಿ, ಕರ್ಣಪ್ರಯಾಗ್ ನಲ್ಲಿ ಅಲಕಾನಂದ ನದಿ ತಟದಲ್ಲಿ ವಾಸವಿರುವ ಜನರು ಮನೆ ಖಾಲಿ ಮಾಡಲು ಮುಂದಾಗಿದ್ದಾರೆ.
150 ಮಂದಿ ನಾಪತ್ತೆ
ರೈಣಿ ಗ್ರಾಮದ ಬಳಿ ಭಾರಿ ಹಿಮಕುಸಿತದಿಂದ ಅವಾಂತರ ಸೃಷ್ಟಿಯಾಗಿದ್ದು, ಈಗಾಗಲೇ ಧೌಲಿಗಂಗಾ ನದಿ ಪ್ರವಾಹದಿಂದ ಹಲವು ಮನೆಗೆ ಹಾನಿಯಾಗಿದೆ. ಋಷಿಗಂಗಾ ಪವರ್ ಪ್ರಾಜೆಕ್ಟ್ ಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಈವರೆಗೆ ಸುಮಾರು 150 ಜನ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಿಮಸ್ಪೋಟಕ್ಕೆ ತುತ್ತಾಗಿ ಹಲವು ಕಾರ್ಮಿಕರು ಕೊಚ್ಚಿಹೋಗಿರುವ ಬಗ್ಗೆ ಅನುಮಾನ ಉಂಟಾಗಿದೆ.
ಸ್ಥಳಕ್ಕೆ ಎಸ್ಡಿಆರ್ಎಫ್, ಐಟಿಬಿಪಿ ಸಿಬ್ಬಂದಿ ಆಗಮಿಸಿದ್ದಾರೆ. ನದಿಪಾತ್ರದ ಗ್ರಾಮಸ್ಥರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಜೊತೆಗೆ ಪ್ರವಾಹದಲ್ಲಿ 2 ಸೇತುವೆಗಳು ಕೊಚ್ಚಿಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಚಮೋಲಿ ಪ್ರವಾಹ: ಉತ್ತರಾಖಂಡ ಮುಖ್ಯಮಂತ್ರಿ ಜೊತೆಗೆ ಶಾ ಮಾತುಕತೆ, ಕೇಂದ್ರದಿಂದ ಸಂಪೂರ್ಣ ನೆರವಿನ ಭರವಸೆ
ಉತ್ತರ ಖಂಡ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಉತ್ತರ್ ಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಹಿಂದಿಯಲ್ಲಿ ಸರಣಿ ಟ್ವೀಟ್ ಪ್ರಕಟಿಸಿರುವ ಅಮಿತ್ ಶಾ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಪ್ರವಾಹ ಪೀಡಿತ ಜನರ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಹೆಚ್ಚುವರಿ ಪಡೆಯನ್ನು ದೆಹಲಿಯಿಂದ ಏರ್ ಲಿಫ್ಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರಾ ಖಂಡದಲ್ಲಿನ ನೈಸರ್ಗಿಕ ವಿಪತ್ತು ಕುರಿತಂತೆ ಅಲ್ಲಿನ ಮುಖ್ಯಮಂತ್ರಿ, ಐಟಿಬಿಪಿ ಹಾಗೂ ಎನ್ ಡಿಆರ್ ಎಫ್ ಡಿಜಿ ಜೊತೆಗೆ ಮಾತುಕತೆ ನಡೆಸಿದ್ದು, ಸಂಬಂಧಿತ ಎಲ್ಲಾ ಅಧಿಕಾರಿಗಳು ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ದೆೇವಭೂಮಿಗೆ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಅವರು ಹೇಳಿದ್ದಾರೆ.
ಉತ್ತರಾಖಂಡದಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಕೇಂದ್ರ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.