Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಚೆನ್ನೈ ಟೆಸ್ಟ್: ಟೀಂ ಇಂಡಿಯಾಗೆ ಆರಂಭಿಕ ಆಘಾತ; 4 ವಿಕೆಟ್ ಪತನ, ಸಂಕಷ್ಟದಲ್ಲಿ ಕೊಹ್ಲಿ ಪಡೆ

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದ್ದು, ಭೋಜನ ವಿರಾಮದ ಬಳಿಕ ಒಟ್ಟು 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇಂಗ್ಲೆಂಡ್ ತಂಡ ನೀಡಿದ 578 ರನ್ ಗಳ ಸವಾಲನ್ನು ಬೆನ್ನು ಹತ್ತಿರುವ ಭಾರತ ತಂಡ ರೋಹಿತ್ ಶರ್ಮಾ, ಶುಬ್ ಮನ್ ಗಿಲ್  ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡಿದೆ.  ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಬ್ ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಇಂಗ್ಲೆಂಡ್ ಬೌಲರ್ ಗಳ ಕರಾರುವಕ್ಕಾದ ದಾಳಿಯಿಂದಾಗಿ ರೋಹಿತ್ ಶರ್ಮಾ ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಆರು ರನ್ ಗಳಿಸಿದ್ದ ರೋಹಿತ್ ಜೋಫ್ರಾ ಆರ್ಚರ್ ಬೌಲಿಂಗ್ ನಲ್ಲಿ ಜಾಸ್ ಬಟ್ಲರ್ ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ ಬೆನ್ನಲ್ಲೇ 29 ರನ್ ಗಳಿಸಿ ಭರವಸೆ ಮೂಡಿಸಿದ್ದ ಶುಭ್ ಮನ್ ಗಿಲ್ ಕೂಡ ಜೋಫ್ರಾ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಚೇತೇಶ್ವರ ಪೂಜಾರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಬೌಲಿಂಗ್ ಯೋಜನೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದರು. ನಿಧಾನಗತಿ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ 48 ಎಸೆತಗಳಲ್ಲಿ 11 ರನ್ ಗಳಿಸಿದರು. ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಡೋಮ್ ಬೆಸ್ಸ್.. ಕೊಹ್ಲಿ ವಿಕೆಟ್ ಉರುಳಿಸಿದರು.  ಇದರ ಬೆನ್ನಲ್ಲೇ ಅಜಿಂಕ್ಯಾ ರಹಾನೆ ಕೂಡ ಡೋಮ್ ಬೆಸ್ ಬೌಲಿಂಗ್ ನಲ್ಲಿ 1 ರನ್ ಗಳಿಸಿ ಜೋ ರೂಟ್ ಗೆ ಕ್ಯಾಚ್ ನೀಡಿ ಔಟಾದರು.

ಇತ್ತೀಚಿನ ವರದಿಗಳು ಬಂದಾಗ ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡು 73 ರನ್ ಗಳಿಸಿದೆ. 26 ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು ಈಗಷ್ಟೇ ಇನ್ನಿಂಗ್ಸ್ ಆರಂಭಿಸಿರುವ ರಿಷಬ್ ಪಂತ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಮತ್ತು ಡೊಮ್ ಬೆಸ್ ತಲಾ 2 ವಿಕೆಟ್ ಕಬಳಿಸಿದ್ದಾರೆ.

No Comments

Leave A Comment