ವಂಚನೆ ಪ್ರಕರಣ: ಕೇರಳ ಕ್ರೈಮ್ ಬ್ರಾಂಚ್ ಪೊಲೀಸರಿಂದ ಸನ್ನಿ ಲಿಯೋನ್ ವಿಚಾರಣೆ ಕೊಚ್ಚಿ: ವಂಚನೆ ಪ್ರಕರಣದಲ್ಲಿ ಕೇರಳದ ಅಪರಾಧ ವಿಭಾಗ ಪೊಲೀಸರು ನಟಿ ಸನ್ನಿ ಲಿಯೋನ್ ನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರಜೆ ದಿನಗಳನ್ನು ಕಳೆಯುವುದಕ್ಕಾಗಿ ಕೇರಳಕ್ಕೆ ಆಗಮಿಸಿರುವ ಸನ್ನಿ ಲಿಯೋನ್ ನ್ನು ಶುಕ್ರವಾರ (ಫೆ.೦5) ರಂದು ರಾತ್ರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. “ಸನ್ನಿ ಲಿಯೋನ್, ನಾವು ಆಯೋಜನೆ ಮಾಡಿದ್ದ 2 ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಭರವಸೆ ನೀಡಿ ತಮ್ಮಿಂದ 29 ಲಕ್ಷಗಳನ್ನು ಪಡೆದು ವಂಚನೆ ಮಾಡಿದ್ದಾರೆ” ಎಂದು ಪೆರುಂಬವೋರ್ ನ ಆರ್ ಶಿಯಸ್ ಪೊಲೀಸರಿಗೆ ದೂರು ನೀಡಿದ್ದರು. “ಕೋವಿಡ್-19 ಪರಿಸ್ಥಿತಿಯಿಂದಾಗಿ ಕಾರ್ಯಕ್ರಮವನ್ನು 5 ಬಾರಿ ಮುಂದೂಡಲಾಗಿತ್ತು, ಕೋವಿಡ್-19 ಕಾರಣದಿಂದಾಗಿಯೇ ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗಲಿಲ್ಲ. ನಿಗದಿತ ವೇಳೆಗೆ ಕಾರ್ಯಕ್ರಮ ನಡೆದಿಲ್ಲದ ಕಾರಣ ನಾನು ಹೋಗಲು ಆಗಲಿಲ್ಲ ಎಂದು ವಿಚಾರಣೆ ವೇಳೆ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಸನ್ನಿ ಲಿಯೋನ್ ತಿಳಿಸಿದ್ದಾರೆ. ದೂರು ನೀಡಿರುವ ವ್ಯಕ್ತಿ ಹಾಗೂ ಸನ್ನಿ ಲಿಯೋನ್ ನಡುವೆ ಚರ್ಚೆ ನಡೆಯುತ್ತಿದ್ದು, ಬೇರೆ ಯಾವುದಾದರೂ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಿದರೆ ತಾವು ಬರಲು ಸಿದ್ಧ ಎಂದು ಸನ್ನಿ ಲಿಯೋನ್ ದೂರುದಾರನಿಗೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. Share this:TweetWhatsAppEmailPrintTelegram