ಮಹಾತ್ಮಾ ಗಾಂಧಿಯವರ ಶಾಂತಿ, ಅಹಿಂಸೆ, ಸರಳ, ಶುದ್ಧ, ಮಾನವೀಯತೆಯ ಜೀವನ ಮತ್ತು ಸಂದೇಶಗಳು ದಾರಿದೀಪ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಬಾಪು ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನಗಳು. ಅವರ ಮಾರ್ಗದರ್ಶನ, ತತ್ವಗಳು ಲಕ್ಷಾಂತರ ಮಂದಿಗೆ ಪ್ರೇರಣೆ. ಇಂದು ಹುತಾತ್ಮ ದಿನದಂದು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಿಳೆಯರು ಮತ್ತು ಪುರುಷರನ್ನು ಇಂದು ನೆನೆಸಿಕೊಳ್ಳೋಣ ಎಂದು ಪ್ರಧಾನಿ ಹೇಳಿದ್ದಾರೆ.
ದೇಶದ ಪಿತಾಮಹ ಎಂದು ಕರೆಯಲ್ಪಡುವ ಮಹಾತ್ಮಾ ಗಾಂಧಿಯವ ಹತ್ಯೆ ಜನವರಿ 30, 1948ರಲ್ಲಿ ನಡೆದಿತ್ತು. ಅವರ ಹತ್ಯೆಯಾದ ದಿನವನ್ನು ದೇಶದಲ್ಲಿ ಹುತಾತ್ಮ ದಿನ ಅಥವಾ ಶಾಹೀದ್ ದಿವಸ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸುವ ದಿನವನ್ನಾಗಿ ಇಂದಿನ ದಿನವನ್ನು ಮೀಸಲಿಡಲಾಗಿದೆ.
ಗುಜರಾತ್ ನ ಪೋರಬಂದರ್ ನಲ್ಲಿ ಅಕ್ಟೋಬರ್ 2, 1869ರಲ್ಲಿ ಜನಿಸಿದ್ದ ಮೋಹನ್ ದಾಸ್ ಕರಮಚಂದ ಗಾಂಧಿ ಉನ್ನತ ಶಿಕ್ಷಣವನ್ನು ಗಳಿಸಿದ್ದು ಇಂಗ್ಲೆಂಡ್ ನಲ್ಲಿ. ಅಂದಿನ ಬ್ರಿಟಿಷ್ ಆಡಳಿತದ ವಿರುದ್ಧ, ಬ್ರಿಟಿಷರ ಗುಲಾಮಗಿರಿ ಆಡಳಿತ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಡುವ ಹೋರಾಟದ ಮುಂಚೂಣಿ ವಹಿಸಿದ್ದರು. ಅದಕ್ಕೆ ಅವರು ಅನುಸರಿಸಿದ ಮಾರ್ಗ ಅಹಿಂಸೆ, ಶಾಂತಿಯುತ ಹೋರಾಟ.
ಮಹಾತ್ಮಾ ಗಾಂಧಿಯವರ ಜೀವನ, ನಡೆ-ನುಡಿಗಳಿಂದ ಪ್ರೇರಣೆಯಾದವರು ಕೋಟ್ಯಂತರ ಮಂದಿ, ಅವರ ತತ್ವ, ಆದರ್ಶಗಳು ಇಂದಿಗೂ, ಇಂದಿನ ಯುವಜನಾಂಗಕ್ಕೆ ಸಹ ಪ್ರಸ್ತುತವಾಗಿದೆ. ಇಂದು ಪುಣ್ಯತಿಥಿಯಂದು ಹಲವು ದೇಶ ಮತ್ತು ರಾಜ್ಯ ನಾಯಕರು ಅವರನ್ನು ಸ್ಮರಿಸಿದ್ದಾರೆ.