Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಶಿವಮೊಗ್ಗ ಸ್ಫೋಟದಿಂದ ಎಚ್ಚೆತ್ತ ಅಧಿಕಾರಿಗಳು: ಮಂಡ್ಯ ಜಿಲ್ಲೆಯ 18 ಗ್ರಾಮಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಬಂದ್!

ಮಂಡ್ಯ: ಶಿವಮೊಗ್ಗ ಸ್ಫೋಟ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಮಂಡ್ಯ ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಇದೀಗ ಜಿಲ್ಲೆಯ 18 ಗ್ರಾಮಗಳ ಸುತ್ತಮುತ್ತ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ನಿಷೇಧ ಹೇರಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಕೆಆರ್’ಎಸ್ ಅಣೆಕಟ್ಟಿಗೆ ಕಂಟಕವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸಂಬಂಧ ಕೆಲ ಸ್ಥಳೀಯರು ಪ್ರತಿಭಟನೆಗಳನ್ನೂ ಕೂಡ ಮಾಡಿದ್ದಾರೆ.

ಬೇಬಿ ಬೆಟ್ಟದಲ್ಲಿ 60ಕ್ಕೂ ಹೆಚ್ಚು ಕಲ್ಲು ಗಣಿಗಾರಿಕೆಗಳಿದ್ದು, ಬಹುತೇಕ ಘಟಕಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹಿಂದೆ ಜಿಲ್ಲಾಡಳಿತ ಈ ಕಲ್ಲು ಗಣಿಗಾರಿಕೆ ಮೇಲೆ ನಿಷೇಧ ಹೇರಿತ್ತು. ಬಳಿಕ ಕೆಲ ವಿನಾಯಿತಿ ನೀಡಿ, ಕ್ವಾರಿಗಳಿಂದ ಕಲ್ಲು ತೆಗೆಯುವುದನ್ನು ಮಾತ್ರ ನಿಷೇಧಿಸಿತ್ತು. ಹೊರಗಿನಿಂದ ಕಲ್ಲು ತಂದು ಕ್ರಷರ್ ಘಟಕ ನಡೆಸಲು ಅವಕಾಶ ನೀಡಲಾಗಿತ್ತು. ಆದರೆ, ಈಗ ಬೇಬಿ ಬೆಟ್ಟದಲ್ಲೇ ರಾತ್ರಿ ವೇಳೆ ಗಣಿ ಮಾಲೀಕರು ಬಂಡೆ ಸ್ಫೋಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಹೋರಾಟಗಾರರು ದೂರು ಕೂಡ ನೀಡಿದ್ದಾರೆ.

ಇದೀಗ ಶಿವಮೊಗ್ಗ ಸ್ಫೋಟ ಪ್ರಕರಣದ ಬಳಿಕ ಎಚ್ಚೆತ್ತ ಅಧಿಕಾರಿಗಳು ಪ್ರದೇಶದ ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿಗಾರಿಕೆ ಮೇಲೆ ನಿಷೇಧ ಹೇರಿದ್ದಾರೆ. ಜನವರಿ 25 ರಿಂದ ಮಾರ್ಚ್ 24ರವರೆಗೂ ಸಂಪೂರ್ಣ ಗಣಿಗಾರಿಕೆ ಮೇಲೆ ಅಧಿಕಾರಿಗಳು ನಿಷೇಧ ಹೇರಿದ್ದಾರೆಂದು ವರದಿಗಳು ತಿಳಿಸಿವೆ.

ಬೇಬಿ ಬೆಟ್ಟ, ಬೇಬಿ ಬೆಟ್ಟ ಕಾವಲ್, ಕಣಿವೆ ಕೊಪ್ಪಲು, ಹೊನಗನಹಳ್ಳಿ, ಕಟ್ಟೇರೆ, ಕೆ.ಮಳನೇಹಳ್ಳಿ, ಮಲಗೆರೆ, ಡಿಂಕಾ, ಅಲ್ಪಹಳ್ಳಿ, ಬೀಡಹಳ್ಳಿ, ಬಿಸ್ತಹಳ್ಳಿ, ಮಾದರಹಳ್ಳಿ, ಬನಗ್ಗಡೋ, ಚಿನ್ನಕುರ್ಳಿ, ಕಾಮನಾಯಕನಹಳ್ಳಿ, ತಿರುಮಲಾಪುರ, ಗುಮನಹಳ್ಳಿ ಮತ್ತು ಮಲ್ಲೆಸಂದ್ರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆಗೆ ನಿಷೇಧ ಹೇರಿರುವ ಅಧಿಕಾರಿಗಳು, ಆದೇಶ ಜನವರಿ 25 ರಿಂದಲೇ ಜಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಮತ್ತು ಇತರೆ ಇಲಾಖೆಯ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಸ್ತು ತಿರುಗಲಿದ್ದು, ಕಲ್ಲುಗಣಿಗಾರಿಕೆಗೆ ಯಾರೂ ಗ್ರಾಮಗಳಿಗೆ ಪ್ರವೇಶಿಸದಂತೆ ಕಣ್ಗಾವಲಿರಿಸಿದ್ದಾರೆ. ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ್ದವರಿಗೆ ಸರ್ಕಾರ ವಿಧಿಸಿದ್ದ ದಂಡವನ್ನು ಸಂಗ್ರಹಿಸಲು ಇದೀಗ ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.

No Comments

Leave A Comment