Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರ: 20 ರೈತ ಮುಖಂಡರಿಗೆ ದೆಹಲಿ ಪೊಲೀಸರಿಂದ ನೋಟಿಸ್ ಜಾರಿ

ನವದೆಹಲಿ: ಜನವರಿ 26 ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ತನಿಖೆ ಚುರುಕುಗೊಂಡಿದ್ದು, ಪ್ರಕರಣ ಸಂಬಂಧ ದೆಹಲಿ ಪೊಲೀಸರು 20 ರೈತ ಮುಖಂಡರಿಗೆ ಗುರುವಾರ ನೋಟಿಸ್ ಜಾರಿ ಮಾಡಿದ್ದಾರೆ.

ಯೋಗೇಂದ್ರ ಯಾದವ್, ಬಲ್ಬೀರ್ ಸಿಂಗ್ ರಜೇವಾಲ್ ಸೇರಿದಂತೆ 20 ರೈತ ಮುಖಂಡರಿಗೆ ನೋಟಿಸ್ ಜಾರಿ ಮಾಡಿರುವ ದೆಹಲಿ ಪೊಲೀಸರು ಮೂರು ದಿನಗಳೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ.

ಟ್ರ್ಯಾಕ್ಟರ್ ಪರೇಡ್ ವೇಳೆ ನಿಯಮ ಹಾಗೂ ಷರತ್ತುಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ರೈತ ಮುಖಂಡರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಹಿಂಸಾಚಾರ ಪ್ರಕರಣ ಸಂಬಂಧ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ದೆಹಲಿ ಪೊಲೀಸ್ ಆಯುಕ್ತ ಎಸ್ಎನ್ ಶ್ರೀವಾತ್ಸವ ಅವರು, ಜನವರಿ 26 ರ ಹಿಂಸಾಚಾರದಲ್ಲಿ ರೈತ ಮುಖಂಡರು ಭಾಗಿಯಾಗಿದ್ದರು. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾದರೂ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದರು.

ಯೋಗೇಂದ್ರ ಯಾದವ್ ಸೇರಿದಂತೆ 20 ರೈತ ಮುಖಂಡರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮೂರು ದಿನಗಳೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆಯಷ್ಟೇ ದೆಹಲಿ ಪೊಲೀಸರು ರೈತ ಮುಖಂಡ ದರ್ಶನ್ ಪಾಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಕೆಂಪು ಕೋಟೆ ಬಳಿ ದೇಶ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ನೋಟಿಸ್ ಅಷ್ಟೇ ಅಲ್ಲದೆ, ಶೀಘ್ರದಲ್ಲೇ ದೆಹಲಿ ಪೊಲೀಸರು ರೈತ ಮುಖಂಡರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.

ಲುಕ್ ಔಟ್ ನೋಟಿಸ್ ದಾರಿಗೆ ಗೃಹ ಸಚಿವ ಅಮಿತ್ ಶಾ ಸೂಚನೆ.
ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರು ದೆಹಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದು, ಇದೀಗ ಈ ಎಫ್ಐಆರ್ ನಲ್ಲಿ ಹೆಸರಿಸಲಾಗಿರುವ ರೈತರ ಮುಖಂಡರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಹಿಂಸಾಚಾರ ಸಂಬಂಧ ನಿನ್ನೆಯಷ್ಟೇ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಸಲಾಗಿದ್ದು, ಸಬೆಯಲ್ಲಿ ಎಫ್ಐಆರ್ ನಲ್ಲಿ ಹೆಸರು ದಾಖಲಾದ ಸುಮಾರು 25 ರೈತ ಮುಖಂಡರಿಗೆ ಲುಕ್ ಔಟ್ ನೋಟಿಸ್ ನೀಡಲು ದೆಹಲಿ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಲುಕ್ ಔಟ್ ನೋಟಿಸ್ ಜಾರಿಯಾದ ಕೂಡಲೇ ರೈತ ಮುಖಂಡರು ತಮ್ಮ ಪಾಸ್’ಪೋರ್ಟ್ ಗಳನ್ನು ಪೊಲೀಸರ ಎದುರು ಒಪ್ಪಿಸಬೇಕಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ನಡುವೆ ಗಲಭೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳನ್ನು ಗೃಹ ಸಚಿವ ಅಮಿತ್ ಶಾ ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಕೆಂಪು ಕೋಟೆಗೆ ತೆರಳಿ ಅಲ್ಲಿ ಉಂಟಾದ ಹಾನಿ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಸಾಮಾನ್ಯಾಗಿ ಆರೋಪಿಗಳು ದೇಶದಿಂದ ಹೊರ ಹೋಗದಂತೆ ತಡೆಯುವ ಸಲುವಾಗಿ ವಲಸೆ ಅಧಿಕಾರಿಗಳು ಲುಕ್ ಔಟ್ ನೋಟಿಸ್ ಬಳಕೆ ಮಾಡುತ್ತಾರೆ. ಅಂತರಾಷ್ಟ್ರೀಯ ಗಡಿ ಪ್ರದೇಶ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಡಲ ತೀರ ಪ್ರದೇಶಗಳು ಮತ್ತು ಬಂದರು ಪ್ರದೇಶಗಳಲ್ಲಿ ಕ್ರಿಮಿನಲ್ ಬಳನ್ನು ಬಂಧಿಸಲು ಈ ನೋಟಿಸ್’ನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

No Comments

Leave A Comment