ಎಫ್’ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಸಮಗ್ರ ತನಿಖೆಗೆ ಸಿಎಂ ಆದೇಶ, 14 ಮಂದಿ ಬಂಧನ
ಬೆಂಗಳೂರ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್’ಸಿ) ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್’ಡಿಎ) ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪ್ರಕರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ಎಫ್’ಡಿಎ ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನವೇ ಬಹಿರಂಗೊಂಡಿರುವ ವಿಚಾರ ಅಕ್ಷಮ್ಯ ಅಪರಾಧ, ಈ ಬಗ್ಗೆ ಅಧಿಕಾರಿಗಳಿಂದ ರಾತ್ರಿಯೇ ಮಾಹಿತಿ ಪಡೆಯಲಾಗಿದೆ. ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ಈಗಾಗಲೇ ತಪ್ಪಿತಸ್ಥರ ಬಂಧವಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಈಗಾಗಲೇ ಸೂಚಿಸಿದ್ದೇನೆ. ಅಗತ್ಯ ಬಿದ್ದರೆ ಹುದ್ದೆಯಿಂದ ವಜಾಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಈ ವರೆಗೂ 14 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆರೋಪಿಗಳಿಂದ ರೂ.35 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಪ್ರಕರಣದ ಮುಖ್ಯ ಸೂತ್ರಧಾರ ಚಂದ್ರು, ರಾಚಪ್ಪ ಸೇರಿದಂತೆ 14 ಆರೋಪಿಗಳು ನೀಡಿರುವ ಮಾಹಿತಿ ಆಧರಿಸಿ, ಮತ್ತಷ್ಟು ಆರೋಪಿಗಳ ಬಂಧನಕ್ಕೆ ಸಿಸಿಬಿ ಪೊಲೀಸರು ಬೀಸಿದ್ದಾರೆ.
ತನಿಖಾ ದೃಷ್ಟಿಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಅಧಿಕಾರಿಯ ಹೆಸರನ್ನು ಸಿಸಿಬಿ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಆದರೆ ಆ ಅಧಿಕಾರಿಯೇ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ್ದು ಅವರ ಕಚೇರಿಯಿಂದ ಪ್ರಶ್ನೆಪತ್ರಿಕೆಗಳನ್ನು ಹೊರತಂದು ಆರೋಪಿ ಚಂದ್ರುಗೆ ನೀಡಿದ್ದ.
ಬಳಿಕ ಚಂದ್ರು ಅವುಗಳನ್ನು ಉಲ್ಲಾಳದ ಆರ್.ಆರ್. ರೆಸಿಡೆನ್ಸಿಯ ಫ್ಲಾಟ್ನಲ್ಲಿಟ್ಟಿದ್ದ. ನಂತರ ತಾವು ಹಾಕಿಕೊಂಡ ಯೋಜನೆಯಂತೆ ಇನ್ನುಳಿದ ರಾಜ್ಯದ ವಿವಿಧೆಡೆಯ ಮಧ್ಯವರ್ತಿಗಳಿಗೆ ಸರಬರಾಜು ಮಾಡಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.