BREAKING NEWS >
ನ.29ರ೦ದು ಶ್ರೀಕ್ಷೇತ್ರಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರ೦ಭ...

ಕಾಯಕಯೋಗಿ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ‘ದಾಸೋಹ ದಿನ’ ಎಂದು ಘೋಷಿಸಿದ ಸಿಎಂ ಯಡಿಯೂರಪ್ಪ

ತುಮಕೂರು: ಕಾಯಕಯೋಗಿ ತುಮಕೂರು ಸಿದ್ದಗಂಗೆಯ ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ ಎರಡನೇ ಪುಣ್ಯಸ್ಮರಣೆ ದಿನವಾದ ಇಂದು ಶ್ರೀಗಳ ಪುಣ್ಯಸ್ಮರಣೆ ದಿನವನ್ನು “ದಾಸೋಹ ದಿನ” ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಶಿವಕುಮಾರ ಶ್ರೀಗಳ ಎರಡನೇ ಪುನ್ಯಸ್ಮರಣೆ ದಿನದಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು.

ಈ ವೇಳೆ ಮಾತನಾಡಿದ ಸಿಎಂ “ಸಿದ್ದಗಂಗೆಯ ಶಿವಕುಮಾರ ಶ್ರೀಗಳು ನಡೆದಾಡುವ ದೇವರು ಎಂದೇ ಹೆಸರಾಗಿದ್ದರು. 80 ವರ್ಷಗಳ ಕಾಲ ನಿರಂತರವಾಗಿ ಅಕ್ಷರ, ಅನ್ನ ನೀಡಿ ಉತ್ತಮ ವ್ಯಕ್ತಿಗಳು, ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಸಿದ್ದಗಂಗಾ ಮಠದ ಕೀರ್ತಿ ವಿಶ್ವದೆತ್ತರಕ್ಕೆ ಕೊಂಡೊಯ್ದಿದ್ದ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನ ಎಂದು ಘೋಷಣೆ ಮಾಡುತ್ತಿದ್ದು ಸರ್ಕಾರದಿಂದ ಈ ಕುರಿತಂತೆ ಶೀಘ್ರದಲ್ಲೇ ಅಧಿಕೃತ ಘೋಷಣೆ  ಹೊರಬೀಳಲಿದೆ” ಎಂದರು.

“ಶ್ರೀಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾಗಿದ್ದರು. ಇಂದು ಅವರು ಭೌತಿಕವಾಗಿ ದೂರವಾಗಿದ್ದರೂ ಅವರ ತತ್ವಗಳು ಸದಾ ನಮ್ಮೊಂದಿಗಿದೆ” ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

“ಸರ್ಕಾರವು ಶ್ರೀಗಳ ಹುಟ್ಟೂರು ವೀರಪುರ ಗ್ರಾಮಕ್ಕೆ 25 ಕೋಟಿ ರೂ. ದೇಣಿಗೆ ನೀಡಿದ್ದು ಗ್ರಾಮವು ಮುಂಬರುವ ದಿನಗಳಲ್ಲಿ ತೀರ್ಥಸ್ಥಳವಾಗುವಂತೆ ಮಾಡುವ ಅಪೇಕ್ಷೆ ಇದೆ” ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ “ಶ್ರೀಗಳು  ಸಾರ್ಥಕ ಜೀವನ ನಡೆಸಿದ್ದರು, ಅವರು ಭೌತಿಕವಾಗಿ ಅಗಲಿದ್ದರೂ ಅವರ ಕಾರ್ಯಗಳಿಂದ ಸದಾಕಾಲ ನಮ್ಮ ಜತೆ ಇರುತ್ತಾರೆ” ಎಂದರು.

ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಪಂಚಮಸಾಲಿ ಜಗದ್ಗುರು ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ, ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಹಲವು ಗಣ್ಯರು ಉಪಸ್ಥಿತರಿದ್ದರು.

No Comments

Leave A Comment