BREAKING NEWS >
ನ.29ರ೦ದು ಶ್ರೀಕ್ಷೇತ್ರಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರ೦ಭ...

ಪಾಠ ಕಲಿತಿದ್ದೇವೆ, ಇನ್ನೆಂದಿಗೂ ಭಾರತವನ್ನು ಲಘುವಾಗಿ ಪರಿಗಣಿಸುವುದಿಲ್ಲ: ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್

ಬ್ರಿಸ್ಬೇನ್: ಟೀಂ ಇಂಡಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಮೂಲಕ ನಾವು ಹೊಸದೊಂದು ಪಾಠ ಕಲಿತಿದ್ದು, ಇನ್ನೆಂದಿಗೂ ಭಾರತವನ್ನು ಲಘವಾಗಿ ಪರಿಗಣಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಬ್ರಿಸ್ಬೇನ್‌ ದಿ ಗಬ್ಬಾ ಅಂಗಳದಲ್ಲಿ ನಿನ್ನೆ ಮುಕ್ತಾಯವಾದ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತು. ಆ ಮೂಲಕ32 ವರ್ಷಗಳ ಬಳಿಕ ಗಬ್ಬಾ ಕ್ರೀಡಾಂಗಣದಲ್ಲಿ ಆಸಿಸ್ ತಂಡವನ್ನು ಸೋಲಿಸಿದ ಮೊದಸ ಏಷ್ಯನ್ ಕ್ರಿಕೆಟ್ ತಂಡ ಎಂಬ ಹಿರಿಮೆಗೂ ಪಾತ್ರವಾಯಿತು.

ಈ ಪಂದ್ಯದ ಬಳಿಕ ಚಾನೆಲ್‌ 7 ಜೊತೆ ಮಾತನಾಡಿದ ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಅವರು, ಭಾರತ ತಂಡ ಮತ್ತು ಭಾರತೀಯ ಆಟಗಾರರನ್ನು ಹಗುರವಾಗಿ ಪರಿಗಣಿಸಬಾರದೆಂಬ ಪಾಠವನ್ನು ಈ ಸರಣಿಯಿಂದ ಕಲಿತಿದ್ದೇವೆಂದು ಹೇಳಿದ್ದಾರೆ.

ಅಡಿಲೇಡ್‌ ಟೆಸ್ಟ್‌ ನಲ್ಲಿ ಕೇವಲ 36 ರನ್ ಗಳಿಗೆ ಆಲೌಟ್ ಆಗಿದ್ದ ಭಾರತ ತಂಡ ಹೀನಾಯವಾಗಿ ಸೋತಿತ್ತು. ಸೋಲಿನ ಹೊರತಾಗಿಯೂ ಬಲಿಷ್ಠವಾಗಿ ಪುಟಿದೆದ್ದ ಭಾರತ ತಂಡ, ಸತತವಾಗಿ ಎರಡನೇ ಬಾರಿಯೂ 2-1 ಅಂತರದಲ್ಲಿ ಟೆಸ್ಟ್‌ ಸರಣಿ ಗೆಲುವು ಸಾಧಿಸಿದೆ. ಇದು ನಂಬಲಾಗದ ಟೆಸ್ಟ್ ಸರಣಿ. ಗೆಲುವು ಅಥವಾ ಸೋಲಿನಿಂದ ಸರಣಿ ಅಂತ್ಯವಾಗುತ್ತದೆ. ಆದರೆ, ಇಂದು ಟೆಸ್ಟ್‌ ಕ್ರಿಕೆಟ್‌ ಗೆದ್ದಿದೆ. ಈ ಸೋಲು ನಮಗೆ ದೀರ್ಘ ಕಾಲ ಕಾಡಲಿದೆ. ಗೆಲುವಿನ ಶ್ರೇಯ ಖಂಡಿತಾ ಭಾರತಕ್ಕೆ ಸಲ್ಲಬೇಕು. ಅವರ ಪ್ರದರ್ಶನ ಅದ್ಭುತವಾದದ್ದು, ನಮಗೆ ಇದರಿಂದ ದೊಡ್ದ ಪಾಠವಾಗಿದೆ ಎಂದು ಹೇಳಿದರು.

ಅಂತೆಯೇ ತಮ್ಮ ಮಾತು ಮುಂದುವರೆಸಿದ ಲ್ಯಾಂಗರ್, ‘ನೀವು ಯಾರನ್ನೂ ಹಗುರವಾಗಿ ಪರಿಗಣಿಸಬಾರದು. ಅದರಲ್ಲೂ ಪ್ರಮುಖವಾಗಿ ಭಾರತೀಯರನ್ನು ಕಡಿಮೆ ಅಂದಾಜು ಮಾಡಬಾರದು. 1.5 ಶತಕೋಟಿ ಭಾರತೀಯರಲ್ಲಿ 11 ಮಂದಿ ವಿರುದ್ಧ ಆಡುವುದಾದರೆ ಅದು ತುಂಬಾ ಕಠಿಣವಾಗಿರುತ್ತದೆ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಾನು ಭಾರತವನ್ನು ಎಷ್ಟು ಅಭಿನಂದಿಸಿದರೂ ಸಾಲದು. ಮೊದಲನೇ ಪಂದ್ಯದಲ್ಲಿ ಇನ್ನೂ ಮೂರು ದಿನಗಳ ಬಾಕಿ ಇರುವಾಗಲೇ ಹೀನಾಯ ಸೋಲು ಅನುಭವಿಸಿತ್ತು. ನಂತರ ಬಲಿಷ್ಠವಾಗಿ ಪುಟಿದೆದ್ದ ಹಾದಿ ಅದ್ಭುತವಾಗಿತ್ತು, ಗೆಲುವಿನ ಶ್ರೇಯ ಅವರಿಗೇ ಸಲ್ಲಬೇಕು.ಯಾವುದನ್ನೂ ಹಗುರವಾಗಿ ಪರಿಗಣಿಸಬಾರದೆಂಬ ದೊಡ್ಡ ಪಾಠವನ್ನು ನಾವು ಕಲಿತಿದ್ದೇವೆ ಎಂದು ಹೇಳಿದರು.

ಅಂತೆಯೇ ಟೀಂ ಇಂಡಿಯಾ ಆಟಗರರನ್ನು ಶ್ಲಾಘಿಸಿದ ಲ್ಯಾಂಗರ್, ‘ಅಡಿಲೇಡ್‌ ಆಘಾತದ ಬಳಿಕ ಭಾರತ ತಂಡ ಕಠಿಣವಾಗಿ ಪುಟಿದೆದ್ದಿದೆ. ಇದರ ಹೊರತಾಗಿಯೂ ಟೆಸ್ಟ್ ಸರಣಿಯುದ್ದಕ್ಕೂ ಗಾಯದ ಸಮಸ್ಯೆಯನ್ನು ಎದುರಿಸಿದೆ. ಜಸ್ ಪ್ರಿತ್‌ ಬುಮ್ರಾ ಹಾಗೂ ಆರ್‌ ಅಶ್ವಿನ್‌ ಅವರಂಥ ಪ್ರಮುಖ ಆಟಗಾರರು ಗಾಯದಿಂದ ಕೊನೆಯ ಪಂದ್ಯದಿಂದ ಹೊರಬಿದ್ದರು. ಆದರೂ, ಶುಭ್ಮನ್‌ ಗಿಲ್‌, ವಾಷಿಂಗ್ಟನ್‌ ಸುಂದರ್‌, ಶಾರ್ದುಲ್‌ ಠಾಕೂರ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಆಸ್ಟ್ರೇಲಿಯಾ ತಂಡದ ಮೇಲೆ ಪ್ರಾಬಲ್ಯ ಸಾಧಿಸಿದರು. ನಾಲ್ಕನೇ ಪಂದ್ಯದ ಐದನೇ ದಿನ 328 ರನ್‌ ಗುರಿ ಯಶಸ್ವಿಯಾಗಿ ಮುಟ್ಟಿದ ಭಾರತ ತಂಡದ ಪರ ಅದ್ಭುತ ಬ್ಯಾಟಿಂಗ್‌ ಮಾಡಿದ ರಿಷಭ್‌ ಪಂತ್‌ ಹಾಗೂ ಶುಭಮನ್‌ ಗಿಲ್‌ ಅವರನ್ನು ಜಸ್ಟಿನ್‌ ಲ್ಯಾಂಗರ್‌ ಗುಣಗಾನ ಮಾಡಿದ್ದಾರೆ.

‘ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್ ಇನಿಂಗ್ಸ್‌ ಅನ್ನು ಇಂದು ರಿಷಭ್‌ ಪಂತ್‌ ಬ್ಯಾಟಿಂಗ್‌ ನೆನಪು ಮಾಡಿಸಿತು. ಎಡಗೈ ಆಟಗಾರನ ಅತ್ಯುತ್ತಮ ಶ್ರಮ ಇದಾಗಿದೆ. ಭಯರಹಿತವಾಗಿ ಆಡಿದ್ದು, ಇದು ಅವರ ಪಾಲಿಗೆ ನಂಬಲಾಗದ ಇನಿಂಗ್ಸ್‌ ಆಗಿದೆ. ಯುವ ಬ್ಯಾಟ್ಸ್ ಮನ್‌ ಶುಭ್ ಮನ್‌ ಗಿಲ್‌(91) ಕೂಡ ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ್ದಾರೆ. ಭಾರತದ ಯುವ ಬೌಲಿಂಗ್‌ ಪಡೆ ನಮ್ಮನ್ನು ಒತ್ತಡಕ್ಕೆ ತಳ್ಳಿತು. ಭಾರತ ಈ ಸರಣಿ ಗೆಲ್ಲಲು ಅರ್ಹವಾಗಿತ್ತು’ ಎಂದು ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ.

No Comments

Leave A Comment