ಉತ್ತರ ಪ್ರದೇಶದಲ್ಲಿ ಕೋವಿಡ್ ಲಸಿಕೆ ಸ್ವೀಕರಿಸಿದ ಮಾರನೇ ದಿನ ಆರೋಗ್ಯ ಕಾರ್ಯಕರ್ತ ಸಾವು! ಮೊರಾದಾಬಾದ್: ಕೋವಿಡ್ ಲಸಿಕೆ ಪಡೆದ ಮಾರನೇ ದಿನ 46 ವರ್ಷದ ಆರೋಗ್ಯ ಕಾರ್ಯಕರ್ತ ಇಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮಹಿಪಾಲ್ ಸಾವಿಗೆ ಲಸಿಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರೆ, ಮೃತ ಮಹಿಪಾಲ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಮಹಿಪಾಲ್ ಮೊರಾದಾಬಾದ್ ಸರ್ಕಾರಿ ಆಸ್ಪತ್ರೆಯ ಸರ್ಜಿಕಲ್ ವಾರ್ಡ್ನಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ಲಸಿಕೆ ಹಾಕಲಾಗಿದ್ದು, ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮಹಿಪಾಲ್ ಅವರ ಮಗ ವಿಶಾಲ್ ಅವರು ತಂದೆ ಉಸಿರಾಡಲು ಕಷ್ಟಪಡುತ್ತಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಗಿ ಹೇಳಿದರು. ‘ನನ್ನ ತಂದೆಗೆ ಕೆಮ್ಮು ಇತ್ತು. ಆದರೆ ಲಸಿಕೆ ಪಡೆದ ನಂತರ ಅವರು ಜ್ವರದಿಂದ ಬಳಲುತ್ತಿದ್ದರು. ಉಸಿರಾಡಲು ಕಷ್ಟಪಡುತ್ತಿದ್ದರು. ಹೀಗಾಗಿ ಭಾನುವಾರ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರಾತ್ರಿ ಮೃತಪಟ್ಟರು ಎಂದು ವಿಶಾಲ್ ಹೇಳಿದ್ದಾರೆ. ಮುಖ್ಯ ವೈದ್ಯಾಧಿಕಾರಿ ಮಿಲಿಂದ್ ಚಂದರ್ ಗರ್ಗ್ ಅವರು ಮರಣೋತ್ತರ ವರದಿಯನ್ನು ಉಲ್ಲೇಖಿಸಿ ಸಾವಿಗೆ ಹೃದಯ ಸಂಬಂಧಿ ಕಾಯಿಲೆ ಎಂದು ಹೇಳಿದರು. ಮಹಿಪಾಲ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತೋರುತ್ತದೆ ಎಂದು ಅವರು ಹೇಳಿದರು. ವ್ಯಾಕ್ಸಿನೇಷನ್ ನಂತರ ಕೆಲವು ಉದ್ಯೋಗಿಗಳು ಜ್ವರದಿಂದ ಬಳಲುತ್ತಿದ್ದಾರೆ ಎಂದು ಸಿಎಮ್ಒ ಹೇಳಿದ್ದಾರೆ. ಆದರೆ ಇತರ ಯಾವುದೇ ಅಡ್ಡಪರಿಣಾಮಗಳ ವರದಿ ಬಗ್ಗೆ ನಿರಾಕರಿಸಿದರು. ಆರೋಗ್ಯ ಅಧಿಕಾರಿಗಳ ಹೇಳಿಕೆಯನ್ನು ನಿರಾಕರಿಸಿದ ಮೃತನ ಕುಟುಂಬಸ್ಥರು ಮಹಿಪಾಲ್ ಎಂದಿಗೂ ಹೃದಯ ಸಂಬಂಧಿ ಸಮಸ್ಯೆಯನ್ನು ಎದುರಿಸಲಿಲ್ಲ. ಜ್ವರ ಮತ್ತು ಕೆಮ್ಮು ಹೊರತುಪಡಿಸಿ ಅವರು ಸಾಕಷ್ಟು ಆರೋಗ್ಯವಾಗಿದ್ದರು ಎಂದು ಹೇಳಿದರು. ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಮೊರಾದಾಬಾದ್ ಜಿಲ್ಲಾಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ. ಇದೇ ವೇಳೆ ಮಹಿಪಾಲ್ ಪ್ರಕರಣ ಅಸಾಧಾರಣ ಮತ್ತು ಉನ್ನತ ಮಟ್ಟದ ವೈದ್ಯಕೀಯ ತನಿಖೆ ನಡೆಸಲಾಗುವುದು ಎಂದರು. Share this:TweetWhatsAppEmailPrintTelegram