Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಕೊರೋನಾ ಎಫೆಕ್ಟ್: ಈ ಬಾರಿ ಗಣರಾಜ್ಯೋತ್ಸವಕ್ಕೆ ವಿದೇಶಿ ಮುಖ್ಯ ಅತಿಥಿಗಳಿಲ್ಲ- ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ

ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಮಹಾಮಾರಿ ಕೊರೋನಾ ವೈರಸ್ ಕಾರಣದಿಂದಾಗಿ ವಿದೇಶಿ ಮುಖ್ಯ ಅತಿಥಿಗಳ ಅನುಪಸ್ಥಿತಿಯಲ್ಲಿ ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಗಣರಾಜ್ಯೋತ್ಸವ ಸಿದ್ಧತೆ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್ ಅವರು, ಮಾರಕ ಕೊರೋನಾ ವೈರಸ್ ಜಾಗತಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಯಾವುದೇ ವಿದೇಶಿ ಮುಖ್ಯ ಅತಿಥಿಗಳನ್ನು ಆಹ್ವಾನಿಸದಿರುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತೀ ವರ್ಷದ ಗಣರಾಜ್ಯೋತ್ಸವಕ್ಕೆ ಯಾವುದೇ ದೇಶದ ಮುಖ್ಯಸ್ಥರೊಬ್ಬರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗುತ್ತದೆ. ಈ ಬಾರಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಹೈಸ್ಪೀಡ್ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಭಾರತ ಪ್ರವಾಸ ಕೈಗೊಳ್ಳುತ್ತಿಲ್ಲ ಎಂದು ಬೋರಿಸ್ ವಿಷಾದಿಸಿದ್ದರು.

ರಾಷ್ಟ್ರೀಯ ಜವಾಬ್ದಾರಿ ನಿರ್ವಹಿಸಲು ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾಗಿ ಬೋರಿಸ್ ಜಾನ್ಸನ್ ಸ್ಪಷ್ಟಪಡಿಸಿದ್ದರು. ಇದೀಗ ಯಾವುದೇ ವಿದೇಶಿ ಅತಿಥಿಗೆ ಆಮಂತ್ರಣ ನೀಡದಿರುವ ನಿರ್ಣಯವನ್ನು ಭಾರತ ಕೈಗೊಂಡಿದೆ.

ಇಷ್ಟೇ ಅಲ್ಲದೇ ಗಣರಾಜ್ಯೋತ್ಸವ ಸಮಾರಂಭದ ಸೇನಾ ಪಥಸಂಚಲನದಲ್ಲೂ ಭಾರೀ ಬದಲಾವಣೆ ಮಾಡಲಾಗಿದೆ, ಈ ಬಾರಿ ಗಣರಾಜ್ಯೋತ್ಸವದ ವೇಳೆ ರಾಜಪಥದ ಬೀದಿಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಯೋಧರು ತಮ್ಮ ತಾಲೀಮು ಪ್ರದರ್ಶನದ ವೇಳೆ ಪರಸ್ಪರ ಒಂದೂವರೆ ಮೀಟರ್ ಗಿಂತ ಹೆಚ್ಚು ಅಂತರ ಕಾಯ್ದುಕೊಳ್ಳಲಿದ್ದಾರೆ. ಪ್ರತೀವರ್ಷದ ಗಣರಾಜ್ಯೋತ್ಸವದ ವೇಳೆ ಎನ್ಎಸ್ ಜಿ ಪಡೆಯ ಯೋಧರು ಒಂದು ಭುಜದ ಅಂತರದಲ್ಲಿ ತಮ್ಮ ತಾಲೀಮು ಪ್ರದರ್ಶಿಸುತ್ತಿದ್ದರು. ಆದರೆ, ಈ ಬಾರಿ ಕೊರೋನಾ ನಿಯಮಾವಳಿ ಪಾಲನೆ ನಿಟ್ಟಿನಲ್ಲಿ ಒಂದು ಭುಜದಷ್ಟು ಅಂತರವನ್ನು ಮೂರೂವರೆ ಮೀಟರ್ ಗೆ ಹೆಚ್ಚಿಸಲಾಗಿದೆ. ಪ್ರತೀ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.40ರಷ್ಟು ಯೋಧರು ಮಾತ್ರವೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲಿದ್ದಾರೆಂದು ಹೇಳಲಾಗುತ್ತಿದೆ.

ಅಲ್ಲದೇ ಒಟ್ಟು 1.5 ಲಕ್ಷ ಜನರಿಗೆ ಸ್ಥಳಾವಕಾಶ ಇರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಬಾರಿ ಕೇವಲ 25 ಸಾವಿರ ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ.

ಪ್ರತಿ ಬಾರಿ ಗಣರಾಜ್ಯೋತ್ಸವದಲ್ಲಿ 600 ಶಾಲಾ ಮಕ್ಕಳು ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಕೇವಲ 160 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ 15 ವರ್ಷದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.

No Comments

Leave A Comment